ಉದಯವಾಹಿನಿ, ಬೆಂಗಳೂರು : ವಿದ್ಯಾರ್ಥಿ ಜೀವನದ ಮಹತ್ವದ ಘಟ್ಟ ಎಂದೇ ಪರಿಗಣಿಸಲಾಗಿರುವ ಎಸ್ಸೆಸ್ಸೆಲ್ಸಿ ಮೊದಲ ವಾರ್ಷಿಕ ಪರೀಕ್ಷೆ ನಾಳೆಯಿಂದ ಏ.6ರವರೆಗೆ ರಾಜ್ಯಾದ್ಯಂತ ನಡೆಯಲಿದ್ದು, ನಕಲು ತಡೆಗಟ್ಟಲು ಈ ಬಾರಿ ಹಿಂದೆಂದಿಗಿಂತಲೂ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಯಾವುದೇ ಗೊಂದಲವಿಲ್ಲದೆ ಸುಸೂತ್ರವಾಗಿ ನಡೆಸಲು ಸಿದ್ದತೆ ಮಾಡಿಕೊಂಡಿದೆ.ನಾಳೆ ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರವರೆಗೆ ಪ್ರಥಮ ಭಾಷೆಯ ಕನ್ನಡ, ತಮಿಳು, ತೆಲುಗು, ಹಿಂದಿ, ಮರಾಠಿ, ಉರ್ದು, ಇಂಗ್ಲಿಷ್ , ಸಂಸ್ಕøತ ವಿಷಯಗಳ ಪರೀಕ್ಷೆ ನಡೆಯಲಿದೆ.ಏ.6ರಂದು ದ್ವಿತೀಯ ಭಾಷೆ ಇಂಗ್ಲಿಷ್ ಮತ್ತು ಕನ್ನಡ ವಿಷಯಗಳೊಂದಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಕ್ತಾಯವಾಗಲಿದೆ. ಸರ್ಕಾರಿ, ಅನುದಾನ, ಅನುದಾನರಹಿತ ಹಾಗೂ ಖಾಸಗಿ ಶಾಲೆಗಳು ಸೇರಿದಂತೆ 4,41,910 ಬಾಲಕರು, 4,28,058 ಬಾಲಕಿಯರು ಸೇರಿದಂತೆ 8,69,968 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡಿದ್ದಾರೆ. ರಾಜ್ಯಾದ್ಯಂತ 2,750 ಪರೀಕ್ಷಾ ಕೇಂದ್ರಗಳನ್ನು ಮಂಡಳಿ ತೆರೆದಿದೆ.
ಒಟ್ಟು ವಿದ್ಯಾರ್ಥಿಗಳ ನೋಂದಣಿಯಲ್ಲಿ 8,10,368 ಶಾಲಾ ವಿದ್ಯಾರ್ಥಿಗಳು, 18,225 ಖಾಸಗಿ ವಿದ್ಯಾರ್ಥಿಗಳು, 41,375 ಪುನರಾವರ್ತಿತ ವಿದ್ಯಾರ್ಥಿಗಳು ಸೇರಿದ್ದಾರೆ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಬಿಎಂಟಿಸಿ, ಕೆಎಸ್ಆರ್ಟಿಸಿ ಸೇರಿದಂತೆ ಸಾರಿಗೆ ಸಂಸ್ಥೆಗಳ ಬಸ್ನಲ್ಲಿ ಉಚಿತವಾಗಿ ಪ್ರಯಾಣಿಸುವ ವ್ಯವಸ್ಥೆ ಕಲ್ಪಿಸಿವೆ. ವಿದ್ಯಾರ್ಥಿಗಳು ಪ್ರವೇಶ ಪತ್ರವನ್ನು ತೋರಿಸಿ ಪ್ರಯಾಣಿಸಬಹುದು.
