ಉದಯವಾಹಿನಿ, ಬೆಂಗಳೂರು: ಮೈಸೂರು- ಚಾಮರಾಜನಗರ, ಮಂಡ್ಯ ಕ್ಷೇತ್ರಗಳನ್ನು ಗೆಲ್ಲಲೇಬೇಕು ಎಂಬ ಹಠಕ್ಕೆ ಬಿದ್ದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ಮೂರು ದಿನಗಳಿಂದಲೂ ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ಬೀಡುಬಿಟ್ಟು ಕಾರ್ಯತಂತ್ರ ರೂಪಿ ಸುವಲ್ಲಿ ನಿರತರಾಗಿದ್ದಾರೆ.

ಇಂದು ಮೈಸೂರಿನಲ್ಲಿ ನಡೆಯುವ ಕಾಂಗ್ರೆಸ್ ಪ್ರಚಾರ ಕಾರ್ಯಕ್ರಮದಲ್ಲಿ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಪರಮಾಪ್ತರಾಗಿರುವ ಎಚ್.ವಿ.ರಾಜೀವ, ಮೈಸೂರಿನ ಮಾಜಿ ಮಹಾಪೌರರಾಗಿದ್ದ ಬಿ.ಎಲ್.ಭೈರಪ್ಪ, ಹಿರಿಯ ಮುಖಂಡ ಕೆ.ವಿ.ಮಲ್ಲೇಶ್ ಸೇರಿದಂತೆ ನೂರಾರು ಮಂದಿ ಇಂದು ಬಿಜೆಪಿ ಮತ್ತು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.  ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಯಿಂದ ಅಸಮಾಧಾನಗೊಂಡಿರುವ ಹಾಗೂ ಬಿಜೆಪಿ ಟಿಕೆಟ್ ಹಂಚಿಕೆಯಲ್ಲಿ ಯಡಿಯೂರಪ್ಪ ಅವರ ಮಾತನ್ನು ನಿರ್ಲಕ್ಷಿಸಿದ್ದರಿಂದಾಗಿ ಅಸಹನೆಗೊಳಗಾಗಿರುವ ನಾಯಕರಿಗೆ ಕಾಂಗ್ರೆಸ್ ಗಾಳ ಹಾಕಿದೆ. ಮಂಡ್ಯ, ಮೈಸೂರು, ರಾಮನಗರ, ತುಮಕೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅತೃಪ್ತ ನಾಯಕರನ್ನು ಕಾಂಗ್ರೆಸ್ಗೆ ಸೆಳೆದುಕೊಳ್ಳಲಾಗುತ್ತಿದೆ. ಇತ್ತೀಚೆಗೆ ಮಾಜಿ ವಿಧಾನಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ ಹಾಗೂ ಅಪ್ಪಾಜಿಗೌಡ, ಮಾಜಿ ಶಾಸಕ ಶ್ರೀನಿವಾಸ್ ಅವರು ಕಾಂಗ್ರೆಸ್ ಸೇರ್ಪಡೆಯಾದರು.

ಅದರ ಬೆನ್ನಲ್ಲೇ ಮೈಸೂರಿನಲ್ಲಿ ಬಿಜೆಪಿಯ ಪ್ರಬಾವಿ ನಾಯಕರು ಕಾಂಗ್ರೆಸ್ ಸೇರುತ್ತಿದ್ದಾರೆ. ಮಂಡ್ಯದಲ್ಲಿ ಸುಮಲತಾ ಅವರಿಗೆ ಟಿಕೆಟ್ ವಂಚನೆಯಾಗುತ್ತಿದ್ದಂತೆ ಅವರ ಬೆಂಬಲಿಗರು ಕಾಂಗ್ರೆಸ್ನತ್ತ ಮುಖ ಮಾಡಿದ್ದಾರೆ.ಬಿಜೆಪಿ ಚುನಾವಣೆ ಹಿನ್ನೆಲೆಯಲ್ಲಿ ಕರೆದಿರುವ ಮಂಡ್ಯ ಜಿಲ್ಲೆಯ ಸಭೆಗೆ ಸಂಸದೆ ಸುಮಲತಾ ಅವರಿಗೆ ಆಹ್ವಾನ ಇಲ್ಲ ಎಂಬುದು ಜಿಲ್ಲೆಯ ಬಹಳಷ್ಟು ಮಂದಿ ಬೆಂಬಲಿಗರನ್ನು ಕೆರಳಿಸಿದೆ.

ಹೀಗಾಗಿ ಕಾಂಗ್ರೆಸ್ನತ್ತ ವಲಸೆ ಬರುವವರ ಪ್ರಮಾಣ ಮತ್ತಷ್ಟು ಹೆಚ್ಚಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಮೈಸೂರು ಲೋಕಸಭಾ ಕ್ಷೇತ್ರದ ಲಕ್ಷ್ಮಣ್ ಅವರನ್ನು ಗೆಲ್ಲಿಸಿಕೊಳ್ಳಲೇ ಬೇಕೆಂದು ಹಠಕ್ಕೆ ಬಿದ್ದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ತಡರಾತ್ರಿ 2 ಗಂಟೆಯವರೆಗೂ ಮುಖಂಡರೊಂದಿಗೆ ಸರಣಿ ಸಭೆಗಳನ್ನು ನಡೆಸಿ ಚುನಾವಣಾ ರಣತಂತ್ರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!