ಉದಯವಾಹಿನಿ, ಹುಬ್ಬಳ್ಳಿ: ರಾಜ್ಯಕ್ಕೆ ಕೇಂದ್ರದಿಂದ ಯುಪಿಎ ಕಾಲದಲ್ಲಿ ಎಷ್ಟು ಹಾಗೂ ಎನ್ ಡಿಎ ಕಾಲದಲ್ಲಿ ಎಷ್ಟು ಎನ್‍ಡಿಆರ್‍ಎಫ್ ಹಣ ಬಂದಿದೆ ಅನ್ನುವುದನ್ನು ರಾಜ್ಯ ಸರ್ಕಾರ ಬಹಿರಂಗಪಡಿಸಲಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸವಾಲು ಹಾಕಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಅಧೋಗತಿಗೆ ಹೋಗಿದೆ. ಅದೇ ಕಾರಣಕ್ಕೆ ಸುಪ್ರೀಂಕೋರ್ಟ್‍ಗೆ ಹೋಗಿದ್ದಾರೆ. ಇದು ರಾಜಕೀಯ ತಂತ್ರಗಾರಿಕೆ. ರಾಜ್ಯ ಸರ್ಕಾರ ಕೇಂದ್ರದಿಂದ ಹಣ ಬಂದಿಲ್ಲ ಎಂದು ಹೇಳುವುದನ್ನು ಬಿಟ್ಟು ಯುಪಿಎ ಅವಧಿಯಲ್ಲಿ ಹಾಗೂ ಎನ್‍ಡಿಎ ಅವಧಿಯಲ್ಲಿ ಎನ್‍ಡಿ ಆರ್‍ಎಫ್ ನಿಧಿಯಿಂದ ಎಷ್ಟು ಹಣ ಬಂದಿದೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಆಗ್ರಹಿಸಿದರು.
ಇದೇ ವೇಳೆ ಮೋದಿ ಮೋದಿ ಎಂದು ಕೂಗುವ ಯುವಕರಿಗೆ ಕಪಾಳಕ್ಕೆ ಹೊಡೆಯಿರಿ ಎಂದು ಸಚಿವ ಶಿವರಾಜ್ ತಂಗಡಗಿ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದ ಅವರು, ಇನ್ನು ಸ್ವಲ್ಪ ದಿನ ತಾಳಿ, ಮತಗಳ ಮೂಲಕ ಜನ ಪರೋಕ್ಷವಾಗಿ ಕಾಂಗ್ರೆಸ್‍ಗೆ ಕಪಾಳಕ್ಕೆ ಹೊಡೆಯುತ್ತಾರೆ ಎಂದು ಹೇಳಿದರು.
ಇನ್ನು ರಾಜ್ಯದಲ್ಲಿ ವಾತಾವರಣ ಉತ್ತಮವಾಗಿದೆ. ಎಲ್ಲ ಕಡೆ ಮೋದಿ ಪರ ಅಲೆ ಇದೆ. ರಾಜ್ಯದಲ್ಲಿ ಭಿನ್ನಮತ ಶಮನ ಆಗುತ್ತಿದೆ. ಸಂಗಣ್ಣ ಕರಡಿ ಅವರು ಸಮಾಧಾನ ಆಗಿದ್ದಾರೆ.ಲೋಕಸಭೆ ಚುನಾವಣಾ ಪ್ರಚಾರಕ್ಕೆ ರಾಷ್ಟ್ರೀಯ ನಾಯಕರು ಎಲ್ಲ ಕಡೆ ಬರುತ್ತಾರೆ. ರಾಷ್ಟ್ರೀಯ ನಾಯಕರ ಜೊತೆ ಸೆಲೆಬ್ರೆಟಿಗಳು ಕೂಡಾ ಪ್ರಚಾರಕ್ಕೆ ಬರುತ್ತಾರೆ. ಎರಡು ಮೂರು ದಿನಗಳಲ್ಲಿ ರಾಷ್ಟ್ರೀಯ ನಾಯಕರ ಪ್ರಚಾರ ಪ್ರವಾಸದ ನಿರ್ಧಾರವಾಗುತ್ತದೆ. ಧಾರವಾಡ ಹಾಗೂ ನಮ್ಮ ಕ್ಷೇತ್ರಕ್ಕೂ ಪ್ರಚಾರಕ್ಕೆ ಬರುತ್ತಾರೆ. ನಮ್ಮ ಕ್ಷೇತ್ರಕ್ಕೆ ಯಡಿಯೂರಪ್ಪ, ವಿಜಯೇಂದ್ರ ಸೇರಿ ಎಲ್ಲರೂ ಪ್ರಚಾರಕ್ಕೆ ಬರುತ್ತಾರೆ ಎಂದರು.

Leave a Reply

Your email address will not be published. Required fields are marked *

error: Content is protected !!