ಉದಯವಾಹಿನಿ, ಬೆಂಗಳೂರು: ಗುರುಲಿಂಗ ಕಾಪಸೆಯವರು ಕನ್ನಡ ಸಾಹಿತ್ಯದ ಸೀಮೆಯನ್ನು ಗಮನಾರ್ಹವಾಗಿ ವಿಸ್ತರಿಸದವರು, ಮಧುರ ಚೆನ್ನ ಮತ್ತು ಅರವಿಂದರ ಕುರಿತು ಅಧಿಕೃತವಾಗಿ ಮಾತನಾಡ ಬಲ್ಲವರಾಗಿದ್ದ ಅವರು ಅಧ್ಯಾತ್ಮದ ಹಿರಿಮೆಯನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ್ದರು ಎಂದು ನಾಡೋಜ ಡಾ.ಮಹೇಶ ಜೋಶಿ ತಿಳಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ಅಗಲಿದ ಹಿರಿಯ ಬರಹಗಾರರ ನೆನಪಿನಲ್ಲಿ ಹಮ್ಮಿ ಕೊಂಡಿದ್ದ ಶ್ರದ್ದಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಹದಿನೆಂಟನೆಯ ವಯಸ್ಸಿನಲ್ಲಿ ತಮ್ಮೂರಿನಲ್ಲಿ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ್ದ ಗುರುಲಿಂಗ ಕಾಪಸೆಯವರು ಸ್ವ ಅಧ್ಯಯನದಿಂದ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾದರು. ಅವರು ಸೇವೆ ಸಲ್ಲಿಸುತ್ತಿದ್ದ ಅವಧಿಯಲ್ಲಿ ಗ್ರಾಮೀಣ ಪ್ರದೇಶದಿಂದ ಬಂದ ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ ತುಂಬಿ ಅವರು ದೊಡ್ಡ ಪ್ರಮಾಣದ ಸಾಧನೆ ಮಾಡಲು ಕಾರಣರಾದರು. ಕರ್ನಾಟಕ ಸಾಹಿತ್ಯ ಅಕಾಡಮಿ ಅಧ್ಯಕ್ಷರಾದ ಸಂದರ್ಭದಲ್ಲಿ ಹಲವಾರು ವಿಶಿಷ್ಟ ಯೋಜನೆಗಳನ್ನು ರೂಪಿಸಿದ್ದರು ಎಂದು ನೆನಪು ಮಾಡಿ ಕೊಂಡ ನಾಡೋಜ ಡಾ.ಮಹೇಶ ಜೋಶಿಯವರು ತಮ್ಮ ಒಡನಾಟದ ಘಟನೆಗಳನ್ನು ನೆನಪು ಮಾಡಿ ಕೊಂಡರು.
ಮಧುರಚೆನ್ನರ ಜೀವನ ಹಾಗೂ ಕೃತಿಗಳು ಕುರಿತು ಮಹಾಪ್ರಬಂಧ ರಚಿಸಿ ಡಾಕ್ಟರೇಟ್ ಪಡೆದಿದ್ದ ಕಾಪಸೆಯವರು ‘ಸಂಪಾದಿಸಿದ ಮಧುರ ಚೆನ್ನರ ಕೃತಿಗಳಲ್ಲಿ ಆ ಕಾಲದ ಅನೇಕ ಜಾನಪದ ವಿರಳ ಸಂಗತಿಗಳು ದಾಖಲಾಗಿವೆ. ಇದನ್ನು ವಿಶ್ಲೇಷಿಸಿ ಕನ್ನಡ ಅಧ್ಯಾತ್ಮಿಕ ಸಾಹಿತ್ಯ ಮತ್ತು ಜನಪದ ಸಾಹಿತ್ಯ ಎರಡಕ್ಕೂ ಅವರು ಮಹತ್ವದ ಕೊಡುಗೆಯನ್ನು ನೀಡಿದ್ದಾರೆ. ವಿಜಯಪುರದ ಹಲಸಂಗಿ ಗೆಳಯರ ಗುಂಪಿನ ಕುರಿತು ಅಧಿಕೃತವಾಗಿ ಮಾತನಾಡುತ್ತಿದ್ದ ಗುರುಲಿಂಗ ಕಾಪಸೆಯವರು ಈ ಕುರಿತು ರಚಿಸಿರುವ ಕೃತಿ, ಮಹತ್ವದ ಸಾಂಸ್ಕೃತಿಕ ದಾಖಲೆಯಾಗಿದೆ ಎಂದರು.

Leave a Reply

Your email address will not be published. Required fields are marked *

error: Content is protected !!