ಉದಯವಾಹಿನಿ, ಹಗರಿಬೊಮ್ಮನಹಳ್ಳಿ: ಲೋಕಸಭಾ ಚುನಾವಣೆಯನ್ನು ಕ್ಷೇತ್ರದಲ್ಲಿ ಅತ್ಯಂತ ಕಟ್ಟುನಿಟ್ಟಿನಿಂದ ಚುನಾವಣೆ ನಡೆಸಲಾಗುವುದು ಎಂದು ಸಹಾಯಕ ಚುನಾವಣೆ ಅಧಿಕಾರಿ ಭೀಮಪ್ಪ ಲಾಳಿ ಹೇಳಿದರು. ಪಟ್ಟಣದ ತಾಲೂಕ ಆಡಳಿತ ಸೌಧದಲ್ಲಿ ಏರ್ಪಡಿಸಿದ್ದ ಚುನಾವಣಾ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿ ನೀತಿ ಸಂಹಿತೆಯ ಸಂದರ್ಭದಲ್ಲಿ ಜನಪ್ರತಿನಿಧಿಗಳು ಉಲ್ಲಂಘನೆ ಮಾಡಿದರೆ ಅವರ ವಿರುದ್ಧ ದೂರು ನೀಡಲು ನಾಗರಿಕರಿಗೆ ಸಿ ವಿಜಲ್ ಆ್ಯಪ್ ಸಿದ್ದಪಡಿಸಿದ್ದು ಸದುಪಯೋಗ ಮಾಡಿಕೊಳ್ಳಬೇಕು. ದೂರುದಾರರ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು. ಕ್ಷೇತ್ರ ವ್ಯಾಪ್ತಿಯಲ್ಲಿ ಗರಗ ನಾಗಲಾಪುರ ಹರಾಳು ಗ್ರಾಮಗಳ ಬಳಿ ಚೆಕ್ ಪೋಸ್ಟ್ ನಿರ್ಮಿಸಲಾಗಿದೆ. ಕ್ಷೇತ್ರದಲ್ಲಿ ಒಟ್ಟು 2,34,233 ಮತದಾರರು ಇದ್ದಾರೆ ಪುರುಷರು 1,16,408 ಮಹಿಳೆಯರು 1,17,802 ಸೇರಿದಂತೆ ಇತರೆ 23 ಮತದಾರರು ಇದ್ದಾರೆ ಒಟ್ಟು 254 ಮತಗಟ್ಟೆಗಳಿವೆ ಗ್ರಾಮೀಣ ಭಾಗದಲ್ಲಿ 180 ಪಟ್ಟಣ ಪ್ರದೇಶದಲ್ಲಿ 74 ಮತಗಟ್ಟೆಗಳಿವೆ ವಲಸೆ ಹೋಗಿರುವ ಮತದಾರರನ್ನು ಕರೆತರಲು ಸ್ವೀಪ್ ಕಾರ್ಯಕ್ರಮ ಮೂಲಕ ಮತದಾರರ ಜಾಗೃತಿ ಮೂಡಿಸಲಾಗುವುದು. ಕಳೆದ ಚುನಾವಣೆಗಳಲ್ಲಿ ಸೂಕ್ಷ್ಮ ಮತಗಟ್ಟೆಗಳನ್ನು ಮತ್ತೆ ಪರಿಶೀಲಿಸಿ ನಿಗಾವಹಿಸಲಾಗುವುದು ಪಿಂಕ್ ಬೂತ್ ಗಳು ಸೇರಿದಂತೆ ಅಗತ್ಯ ಸೌಕರ್ಯಗಳು ಕಲ್ಪಿಸಲಾಗುವುದು ಎಂದರು. ತಹಸೀಲ್ದಾರ್ ಚಂದ್ರಶೇಖರ್ ಶಂಬಣ್ಣ ಗಾಳಿ ಮಾತನಾಡಿ ಹದಿನೆಂಟು ವರ್ಷ ತುಂಬಿದವರು ಮತದಾರ ಪಟ್ಟಿಯಲ್ಲಿ ಹೆಸರು ಸೇರಿಸುವ ಅವಕಾಶವಿದೆ. ಹೊಸ ನೊಂದಣಿದಾರರಿಗೆ ಮತದಾನದ ಗುರುತಿನ ಚೀಟಿ ಅಂಚೆಯ ಮೂಲಕ ಮನೆಗೆ ವಿಳಾಸ ತಲುಪಿಸಲಾಗುವುದು ಮತದಾರರ ಪಟ್ಟಿಯಲ್ಲಿ ಹೊಸದಾಗಿ ಸೇರ್ಪಡೆಗೆ ಏಪ್ರಿಲ್ 12 ರೊಳಗೆ ಫಾರಂ ನಂಬರ್ 06 ನಮೂನೆಯನ್ನು ಭರ್ತಿ ಮಾಡಿ ಅಧಿಕಾರಿಗಳಿಗೆ ನೀಡಬಹುದಾಗಿದೆ ಎಂದರು. ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ಸಂಯೋಜಕ ಮುಸ್ತಕ್ ಅಹಮದ್, ಮಹಾಂತೇಶ್ ಸುನಿಲ್ ಇತರರಿದ್ದರು.
