ಉದಯವಾಹಿನಿ ,ಬೆಂಗಳೂರು: ನೀರಿನ ದರ ಪರಿಷ್ಕರಿಸುವಂತೆ ಬೆಂಗಳೂರು ಜಲಮಂಡಳಿ ನೂತನವಾಗಿ ರಚನೆಗೊಳ್ಳುವ ಸರ್ಕಾರಕ್ಕೆ ಪತ್ರ ಬರೆಯಲು ಮುಂದಾಗಿದ್ದು, ಸರ್ಕಾರ ಸಮ್ಮತಿ ನೀಡಿದ್ದೇ ಆದರೆ, ಜನರಿಗೆ ನೀರು ಇನ್ನಷ್ಟು ದುಬಾರಿಯಾಗಲಿದೆ.
ತೊರೆಕಾಡನಹಳ್ಳಿ ಜಲಾಶಯದಿಂದ 90 ಕಿ.ಮೀ ದೂರದವರೆಗೆ ಬೆಂಗಳೂರಿಗೆ ಕಾವೇರಿ ನೀರು ಹರಿಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್ಎಸ್ಬಿ) ಪ್ರತಿ ತಿಂಗಳು ಸುಮಾರು 70 ಲಕ್ಷ ರುಪಾಯಿ ವಿದ್ಯುತ್ ಬಿಲ್ ಪಾವತಿ ಮಾಡುತ್ತಿತ್ತು. ವಿದ್ಯುತ್ ದರ ಹೆಚ್ಚಾದ ಹಿನ್ನೆಲೆಯಲ್ಲಿ ಈ ದರ ಇದೀಗ 74 ಲಕ್ಷ ರುಪಾಯಿಗಳಿಗೆ ಹೆಚ್ಚಳವಾಗಿದೆ.ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ಪ್ರಸಕ್ತ ಸಾಲಿನ ಆರ್ಥಿಕ ವರ್ಷದಲ್ಲಿ ರಾಜ್ಯದಲ್ಲಿ ಇಂಧನ ದರವನ್ನು (ಯೂನಿಟ್ಗೆ 70 ಪೈಸೆ) ಶೇ.8.31 ಹೆಚ್ಚಳ ಮಾಡಿದೆ. ಪ್ರಸ್ತುತ ಬಿಡಬ್ಲ್ಯೂಎಸ್‌ಎಸ್’ಬಿ ಕೆಪಿಟಿಸಿಎಲ್ ಮತ್ತು ಸಿಇಎಸ್’ಸಿಗೆ ಬಿಲ್ ಪಾವತಿ ಮಾಡುತ್ತಿದೆ.ದರ ಹೆಚ್ಚಳ ಕುರಿತು ಮಾತನಾಡಿದ ಬಿಡಬ್ಲ್ಯುಎಸ್ಎಸ್ಬಿ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, 6 ತಿಂಗಳ ಹಿಂದೆ ಸರ್ಕಾರಕ್ಕೆ ಈ ಬಗ್ಗೆ ಪ್ರಸ್ತಾವನೆ ಕಳುಹಿಸಲಾಗಿತ್ತು. ಚುನಾವಣಾ ವರ್ಷ ಹಿನ್ನೆಲೆಯಲ್ಲಿ ಸರ್ಕಾರ ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ. ವಿದ್ಯುತ್ ದರ ಹೆಚ್ಚಾದ ಹಿನ್ನೆಲೆಯಲ್ಲಿ ದರ ಹೆಚ್ಚಳದ ಚಿಂತನೆಗಳು ಬಂದಿದ್ದವು. ಇದೀಗ ಹೊಸ ಸರ್ಕಾರಕ್ಕೆ ಹೊಸ ಪ್ರಸ್ತಾವನೆ ಸಲ್ಲಿಸುತ್ತೇವೆ.
