
ಉದಯವಾಹಿನಿ , ರಷ್ಯಾ ಉಕ್ರೇನ್ ಮೇಲೆ ಮತ್ತೊಂದು ಡೋನ್ ದಾಳಿ ನಡೆಸಿದೆ. ಗಣಿಗಾರರನ್ನು ಕೆಲಸಕ್ಕೆ ಕರೆದೊಯ್ಯುತ್ತಿದ್ದ ಖಾಸಗಿ ಬಸ್ ಮೇಲೆ ನಡೆದ ದಾಳಿಯಲ್ಲಿ ಕನಿಷ್ಠ 15 ಮಂದಿ ಮೃತಪಟ್ಟಿದ್ದು, ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ಡ್ರಿಪ್ರೊ ಪ್ರದೇಶದ ಪಾವೋಹ್ರಾದ್ ಜಿಲ್ಲೆಯ ಟೆರ್ನಿವ್ಯಾ ಸಮೀಪ ನಡೆದಿದೆ ಎಂದು ಉಕ್ರೇನ್ ರಾಜ್ಯ ತುರ್ತು ಸೇವೆ ಮಾಹಿತಿ ನೀಡಿದೆ.
ಡಿಟಿಇಕೆ ಕಲ್ಲಿದ್ದಲು ಘಟಕದ ಬಳಿ ಸಾಗುತ್ತಿದ್ದ ಬಸ್ ಮೇಲೆ ಡೋನ್ ಡಿಕ್ಕಿ ಹೊಡೆದ ಪರಿಣಾಮ ವಾಹನ ಬೆಂಕಿಗಾಹುತಿಯಾಯಿತು. ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದರೂ, ಅನೇಕರು ಪ್ರಾಣ ಕಳೆದುಕೊಳ್ಳಬೇಕಾಯಿತು. ಮೊದಲಿಗೆ ಸಾವಿನ ಸಂಖ್ಯೆ 12 ಎಂದು ತಿಳಿಸಲಾಗಿದ್ದರೂ, ನಂತರ ಅದನ್ನು 15ಕ್ಕೆ ಹೆಚ್ಚಿಸಲಾಗಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
