ಉದಯವಾಹಿನಿ, ಮಾಲೂರು: ೨೦೧೮-೧೯ರ ಎಸ್‌ಎಫ್‌ಸಿ ಅನುದಾನ ೩.೬೦ ಲಕ್ಷ ವೆಚ್ಚದ ಮುಖ್ಯ ರಸ್ತೆಯ ಅಭಿವೃದ್ಧಿ ಕಾಮಗಾರಿಯ ೨ನೇ ಪದರ ಒಂದು ವರ್ಷ ನಾಲ್ಕು ತಿಂಗಳ ನಂತರ ಡಾಂಬರೀಕರಣ ಕಾಮಗಾರಿಯು ನಡೆಯುತ್ತಿರುವುದರಿಂದ ವಾಹನ ಸಂಚಾರದ ನಡುವೆ ಗುಣಮಟ್ಟದ ಕಾಮಗಾರಿ ನಡೆಸಲು ಸಾಧ್ಯವಿಲ್ಲ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ಬಾರಿ ತೊಂದರೆಯಾಗಿದೆ ಎಂದು ಪುರಸಭಾ ಸದಸ್ಯ ಭಾನುತೇಜ ಆರೋಪಿಸಿದ್ದಾರೆ.
ಅವರು ಪಟ್ಟಣದ ಮುಖ್ಯ ರಸ್ತೆಯ ಕೆಂಪೇಗೌಡ ವೃತದಿಂದ ರೈಲ್ವೆ ಸೇತುವೆ ವರಗಿನ ಎಸ್.ಎಫ್.ಸಿ ಅನುದಾನದಲ್ಲಿ ೨ನೇ ಹಂತದ ಡಾಂಬರೀಕರಣ ವೀಕ್ಷಿಸಿ ಮಾತನಾಡಿದರು.
೨೦೧೮-೧೯ ರಲ್ಲಿ ಮುಖ್ಯ ರಸ್ತೆಯ ಹಾರೋಹಳ್ಳಿ ಕ್ರಾಸ್‌ನಿಂದ ರೈಲ್ವೆ ಸೇತುವೆ ವರೆಗಿನ ರಸ್ತೆಯನ್ನು ೩ ಕೋಟಿ ೬೦ ಲಕ್ಷ ರೂಗಳ ವೆಚ್ಚದಲ್ಲಿ ೪ ಕಿ.ಮೀ ರಸ್ತೆಯನ್ನು ಗುತ್ತಿಗೆದಾರರು ಟೆಂಡರ್ ಪಡೆದು ೧ನೇ ಹಂತದ ಪದರ ರಸ್ತೆ ಡಾಂಬರೀಕರಣವನ್ನು ಮಾಡಿದ್ದು, ಒಂದು ವರ್ಷ ನಾಲ್ಕು ತಿಂಗಳು ಕಳೆದರೂ ಸಹ ೨ನೇ ಹಂತದ ಡಾಂಬರೀಕರಣವನ್ನು ಗುತ್ತಿಗೆದಾರರು ಪೂರ್ಣಗೊಳಿಸಿರಲಿಲ್ಲ. ಶ್ರಾವಣ ಮಾಸದ ಮೂರನೇ ಶ್ರಾವಣ ಶನಿವಾರ ವಾಗಿರುವುದರಿಂದ ತಾಲ್ಲೂಕಿನ ಚಿಕ್ಕತಿರುಪತಿ ಹಾಗೂ ವಿವಿಧ ದೇವಾಲಯಕ್ಕೆ ತೆರಳುವ ಸಾರ್ವಜನಿಕರು ಮುಖ್ಯ ರಸ್ತೆಯಲ್ಲಿ ಸಂಚರ ಮಾಡಬೇಕಾಗಿದ್ದು, ಆದರೆ ಇದೇ ದಿನ ಗುತ್ತಿಗೆದಾರರು ಡಾಂಬರೀಕರಣ ಕಾಮಗಾರಿ ಪ್ರಾರಂಭಿಸಿದ್ದು, ಬೆಂಗಳೂರು ರಸ್ತೆ ಕೋಲಾರ ರಸ್ತೆ ಹೊಸೂರು ರಸ್ತೆ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿ ಸುಮಾರು ಚೊಕ್ಕಂಡಹಳ್ಳಿ ಗೇಟ್‌ವರೆಗೆ ವಾಹನಗಳು ಸಾಲುಗಟ್ಟಿ ಗಂಟೆಗಟ್ಟಲೆ ವಾಹನಗಳು ರಸ್ತೆಯಲ್ಲಿ ನಿಂತು ಚಾಲಕರು ಹಾಗೂ ಸಾರ್ವಜನಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಎರಡನೇ ಹಂತದ ಡಾಂಬರೀಕರಣವು ಒಂದು ಕಡೆ ಡಾಂಬರೀಕರಣ ಹಾಕುತ್ತಿದ್ದರೆ, ವಾಹನ ಸವಾರರು ಗಂಟೆಗಟ್ಟಲೆ ನಿಂತು ಬೆಸರಗೊಂಡು ಮತ್ತೊಂದು ಕಡೆ ಅದರ ಮೇಲೆ ವಾಹನಗಳು ಸಂಚರಿಸುತ್ತಿರುವದರಿಂದ ರಸ್ತೆಯ ಡಾಂಬರು ಕಿತ್ತು ಹೋಗಿ ಗುಣಮಟ್ಟವು ಸಹ ಕಳೆದುಕೊಳ್ಳುತ್ತಿದೆ ಕಾಮಗಾರಿಯು ನಡೆಯುತ್ತಿದ್ದರೂ ಬೆಳಗ್ಗೆಯಿಂದ ಡಾಂಬರೀಕರಣ ಕಾಮಗಾರಿಯ ಗುಣಮಟ್ಟವನ್ನು ವೀಕ್ಷಿಸಲು ಪುರಸಭೆಯ ಅಧಿಕಾರಿಗಳು, ಇಂಜಿನಿಯರ್ ಸಹ ಸ್ಥಳಕ್ಕೆ ಬಂದಿಲ್ಲ. ತಾಲೂಕಿನಲ್ಲಿ ಶಾಸಕರು ರಸ್ತೆಗಳ ಅಭಿವೃದ್ಧಿಗೆ ಸರ್ಕಾರದಿಂದ ಸಾವಿರಾರು ಕೋಟಿ ರೂಗಳ ಅನುದಾನ ಸರ್ಕಾರದಿಂದ ತಂದಿರುವುದಾಗಿ ಸಭೆ ಸಮಾರಂಭಗಳಲ್ಲಿ ಹೇಳುತ್ತಾರೆ ಆದರೆ ಗುತ್ತಿಗೆದಾರರು ಗುಣಮಟ್ಟದ ರಸ್ತೆಗಳ ಅಭಿವೃದ್ಧಿ ಮಾಡುತ್ತಿಲ್ಲ ಇದರಿಂದ ತಾಲೂಕು ಆಡಳಿತ ಹಾಗೂ ಪುರಸಭೆಗೆ ಕೆಟ್ಟ ಹೆಸರು ಬರುತ್ತದೆ ಎಂದರು.
