ಉದಯವಾಹಿನಿ, ¨ ಬೆಂಗಳೂರು: ಪ್ರಸಿದ್ಧ ಸಮಾಜ ಸೇವಕಿ, ಬೆಂಗಳೂರಿನ ಸುಮಂಗಲಿ ಸೇವಾ ಆಶ್ರಮದ ಸಂಸ್ಥಾಪಕಿ ಡಾ. ಎಸ್.ಜಿ. ಸುಶೀಲಮ್ಮ ಅವರಿಗೆ ಈ ಬಾರಿಯ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.ಮಹಿಳಾ ಸಬಲೀಕರಣ, ಶಿಶು ಸಂರಕ್ಷಣೆ ಮತ್ತು ಬಡವರ ಕಲ್ಯಾಣ, ಮಹಿಳಾ ಒಕ್ಕೂಟಗಳ ರಚನೆ, ಸ್ವಯಂ ಉದ್ಯೋಗ ತರಬೇತಿಯನ್ನು ತಮ್ಮ ಸಂಸ್ಥೆಯಿಂದ ನೀಡಿ ಜನರ ಅಭಿವೃದ್ಧಿಗೆ ಶ್ರಮಿಸಿದ್ದಕ್ಕೆ ಸುಶೀಲಮ್ಮ ಅವರಿಗೆ ಅರ್ಹವಾಗಿಯೇ ಈ ಪ್ರಶಸ್ತಿ ಸಿಕ್ಕಿದೆ.
ಬಡವರು, ಅನಾಥರು, ನಿರಾಶ್ರಿತ ಮಕ್ಕಳು ಮತ್ತು ಮಹಿಳೆಯರ ಸೇವೆ ಮಾಡಲು 1975ರಲ್ಲಿ ಬೆಂಗಳೂರಿನ ಹೆಬ್ಬಾಳದ ನೆರೆಯಲ್ಲಿರುವ ಚೋಳನಾಯಕನಹಳ್ಳಿಯಲ್ಲಿ ಸುಮಂಗಲಿ ಸೇವಾಶ್ರಮ ಸಂಸ್ಥೆಯನ್ನು ಸುಶೀಲಮ್ಮ ಸ್ಥಾಪಿಸಿದರು. 1976ರಲ್ಲಿ ಬಸವಾನಂದ ನರ್ಸರಿ, 1979ರಲ್ಲಿ ಸುಮಂಗಲಿ ಯುವತಿ ಮಂಡಳಿಯನ್ನು ಸ್ಥಾಪಿಸಿದರು. 1985ರಲ್ಲಿ ಚೋಳನಾಯಕನಹಳ್ಳಿಯಲ್ಲಿ ಬಸವಾನಂದ ಹಿರಿಯ ಪ್ರಾಥಮಿಕ ಶಾಲೆಯನ್ನು ಪ್ರಾರಂಭಿಸಿದರು.

ಅನಾಥ ಮಹಿಳೆಯರು, ಮಕ್ಕಳು ಮತ್ತು ವೃದ್ಧರಿಗೆ ಆಶ್ರಯ ನೀಡಿದ ಇವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಸರ್ಕಾರದ ರಾಣಿ ಕಿತ್ತೂರು ಚೆನ್ನಮ್ಮ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿದೆ. ಸುಶೀಲಮ್ಮ ಅವರಿಗೆ ಜಾನಕಿದೇವಿ ಬಜಾಜ್ ಪುರಸ್ಕಾರ, ಮೈಸೂರು ದಸರಾ ಪ್ರಶಸ್ತಿ ಮತ್ತು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಡಾಕ್ಟರೇಟ್ ಪದವಿ ಸಿಕ್ಕಿದೆ. 1939ರ ಮೇ 24ರಂದು ಬೆಂಗಳೂರಿನಲ್ಲಿ ಜನಿಸಿದ ಎಸ್.ಜಿ. ಸುಶೀಲಮ್ಮ 1959ರಿಂದ 1967ರ ವರೆಗೆ ರೆಂಕೋ ಕಾರ್ಖಾನೆಯಲ್ಲಿ 15 ವರ್ಷ ಸೇವೆ ಸಲ್ಲಿಸಿ, 1963ರಲ್ಲಿ ವೃತ್ತಿ ಜೀವನಕ್ಕೆ ರಾಜೀನಾಮೆ ನೀಡಿ ಸಂಪೂರ್ಣವಾಗಿ ಸಮಾಜಸೇವೆಯಲ್ಲಿ ತೊಡಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!