ಉದಯವಾಹಿನಿ, ಬೆಂಗಳೂರು: ಕರ್ನಾಟಕ ಗೆಜಿಟೆಡ್ ಪ್ರೊಬೆಷನರಿ ಹುದ್ದೆಗಳಿಗೆ ನಿಗದಿಯಾಗಿರುವ ಪರೀಕ್ಷೆಯ ವಿಚಾರದಲ್ಲಿ ಭಾರೀ ಚರ್ಚೆಗಳು ನಡೆಯುತ್ತಿದ್ದು, ಪ್ರತಿಭಟನೆಗಳಿಗೆ ಜಗ್ಗದೆ ಆ.27ರಂದೇ ಪ್ರಿಲಿಮ್ಸ್ ಪರೀಕ್ಷೆ ನಡೆಸುವುದಾಗಿ ಕೆಪಿಎಸ್ಸಿ ಹಾಗೂ ಸರ್ಕಾರ ಹಠಕ್ಕೆ ಬಿದ್ದಿವೆ.
ನಗರದ ಫ್ರೀಡಂಪಾರ್ಕ್ನಲ್ಲಿ ಪ್ರತಿಭಟನೆ ನಡೆಸಿದ ಕೆಲವರು ಕೆಎಎಸ್ ಪರೀಕ್ಷೆಗೆ ಪೂರ್ವ ತಯಾರಿ ಮಾಡಿಕೊಳ್ಳಲು ಕಾಲಾವಕಾಶ ನೀಡಬೇಕು. ಕನಿಷ್ಠ ಮೂರು ತಿಂಗಳ ಕಾಲ ಪರೀಕ್ಷೆಯನ್ನು ಮುಂದೂಡಬೇಕೆಂದು ಪಟ್ಟು ಹಿಡಿದಿದ್ದಾರೆ.
ಪ್ರತಿಭಟನೆಯ ಜೊತೆಗೆ ರಾಜ್ಯ ಸರ್ಕಾರದ ಸಚಿವರು, ಅಧಿಕಾರಿಗಳಿಗೆ ನಿರಂತರವಾಗಿ ಕರೆ ಮಾಡಿ ವಾಟ್ಸಪ್ ಸಂದೇಶಗಳನ್ನು ಕರೆಸಿ ಒತ್ತಡ ಹೇರುವ ತಂತ್ರಗಾರಿಕೆ ನಡೆಸಿದ್ದಾರೆ. ಸಾವಿರಾರು ಆಕಾಂಕ್ಷಿಗಳು ಸಚಿವರ, ಅಧಿಕಾರಿಗಳ ಮೊಬೈಲ್ ಸಂಖ್ಯೆಗಳನ್ನು ವಿನಿಮಯ ಮಾಡಿಕೊಂಡು ಏಕಕಾಲಕ್ಕೆ ಸಂದೇಶ ರವಾನಿಸಿದ್ದಾರೆ.
ಇದರಿಂದ ನಿದ್ದೆ ಮಾಡಲು ಆಗದೆ ಬಹಳಷ್ಟು ಮಂದಿ ಸಚಿವರು, ಅಧಿಕಾರಿಗಳು ಮೊಬೈಲ್ಗಳನ್ನು ಸ್ವಿಚ್ ಆಫ್ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಇನ್ನು ಕೆಲವರು ಲ್ಯಾಂಡ್ಲೈನ್ಗಳ ನಂಬರ್ಗಳಿಗೂ ನಿರಂತರವಾಗಿ ಕರೆ ಮಾಡಿದ್ದಾರೆ. ಏಕಾಏಕಿ ಈ ರೀತಿಯ ದೂರವಾಣಿ ಕರೆಗಳನ್ನು ಸಹಿಸಲಾಗದೆ ಅಧಿಕಾರಿಗಳು, ಸಚಿವರು ಹೈರಾಣರಾಗಿದ್ದಾರೆ.ಪರೀಕ್ಷೆ ಮುಂದೂಡಬೇಕೆಂಬುದು ಆಕಾಂಕ್ಷಿಗಳ ಒತ್ತಾಯವಾಗಿದ್ದರೆ ಅದಕ್ಕೆ ಕ್ಯಾರೆ ಎನ್ನದೆ ನಿಗದಿತ ಅವಧಿಯಲ್ಲೇ ಪರೀಕ್ಷೆ ನಡೆಸಲಿದೆ ಎಂದು ಸರ್ಕಾರ ಸಡ್ಡು ಹೊಡೆದಿದೆ.

ಲೋಕಸೇವಾ ಆಯೋಗ ಸ್ವಾಯತ್ತ ಸಂಸ್ಥೆಯಾಗಿದ್ದರೂ ಸರ್ಕಾರದ ಸಲಹೆ ಆಧರಿಸಿ ಪರೀಕ್ಷಾ ಪ್ರಕ್ರಿಯೆಗಳನ್ನು ನಡೆಸುತ್ತದೆ. ಈ ಹಿಂದೆ ಹಲವಾರು ಪರೀಕ್ಷೆಗಳಲ್ಲಿ ಹಗರಣಗಳು, ಪ್ರಶ್ನೆ ಪತ್ರಿಕೆ ಸೋರಿಕೆ, ಸ್ವಜನ ಪಕ್ಷಪಾತ ಸೇರಿ ನಾನಾ ಅದ್ವಾನಗಳು ನಡೆದಿದ್ದವು. ಪಿಎಸ್ಐ ಪರೀಕ್ಷೆಯಂತೂ ಒಂದು ಸರ್ಕಾರದ ಭವಿಷ್ಯವನ್ನೇ ನಿರ್ಧಾರ ಮಾಡುವಷ್ಟು ಸದ್ದು ಮಾಡಿತ್ತು. ಅದಕ್ಕೂ ಮೊದಲು ಕೆಎಎಸ್ ಪರೀಕ್ಷೆಗಳು ಗೊಂದಲಕ್ಕೊಳಗಾಗಿ ಲಕ್ಷಾಂತರ ಅಭ್ಯರ್ಥಿಗಳ ಭವಿಷ್ಯ ತೂಗುಯ್ಯಾಲೆಯಾಗಿತ್ತು.ಇತ್ತೀಚಿನ ದಿನಗಳಲ್ಲಿ ಸಂಸತ್ ಹಾಗೂ ರಾಜ್ಯ ವಿಧಾನಮಂಡಲದಲ್ಲಿ ಪರೀಕ್ಷಾ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಪ್ರಮುಖ ಮಸೂದೆಗಳನ್ನು ರೂಪಿಸಲಾಗಿದೆ. ಹೀಗಾಗಿ ಯಾವುದೇ ಅಕ್ರಮಗಳು ನಡೆದರೂ ಕಠಿಣ ಶಿಕ್ಷೆ ವಿಧಿಸುವ ನಿಯಮಾವಳಿಗಳು ಚಾಲ್ತಿಯಲ್ಲಿವೆ.

Leave a Reply

Your email address will not be published. Required fields are marked *

error: Content is protected !!