ಉದಯವಾಹಿನಿ, ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌‍ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನವನ್ನು ಪ್ರತಿಪಕ್ಷಗಳು ಮಾಡುವುದಿಲ್ಲ. ಆ ಪಕ್ಷದೊಳಗೇ ಮುಖ್ಯಮಂತ್ರಿಯನ್ನು ಕೆಳಗಿಳಿಸುವ ಪಿತೂರಿ ನಡೆಯುತ್ತಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಬಾಂಬ್‌ ಸಿಡಿಸಿದ್ದಾರೆ.
ಬಿಜೆಪಿ ಇಲ್ಲವೇ ಜೆಡಿಎಸ್‌‍ ಈ ಸರ್ಕಾರವನ್ನು ಕೆಡುವ ಪ್ರಯತ್ನ ಮಾಡುತ್ತಿಲ್ಲ. ನಾವು ಪ್ರತಿಪಕ್ಷವಾಗಿ ಸರ್ಕಾರದ ವೈಫಲ್ಯದ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ. ಆಡಳಿತಾರೂಢ ಪಕ್ಷದಲ್ಲೇ ಇಕ್ಕಟ್ಟು ಬಿಕ್ಕಟ್ಟು ಎದ್ದು ಕಾಣುತ್ತಿದೆ. ತಾನಾಗೆ ಸರ್ಕಾರ ಅಸ್ಥಿರಗೊಂಡರೆ ನಾವೇನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ನಂತರ ಯಾರನ್ನು ಸಿಎಂ ಮಾಡಬೇಕು ಎಂದು ಕಾಂಗ್ರೆಸ್‌‍ ಪಕ್ಷದಲ್ಲಿ ಚರ್ಚೆಯಾಗುತ್ತಿದೆ. ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌, ಗೃಹಸಚಿವ ಪರಮೇಶ್ವರ್‌, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಚಿವರಾದ ಎಂ.ಬಿ. ಪಾಟೀಲ್‌, ಸತೀಶ್‌ ಜಾರಕಿಹೊಳಿ, ಜಮೀರ್‌ ಅಹಮದ್‌ ಸೇರಿದಂತೆ ಬಹಳಷ್ಟು ಜನ ಓಡಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಬಿಜೆಪಿ, ಜೆಡಿಎಸ್‌‍ನವರು ಸರ್ಕಾರ ಬೀಳಿಸುವುದಿಲ್ಲ.ನಾವು ಯಾವತ್ತೂ ಸರ್ಕಾರ ಬೀಳಿಸುತ್ತೇವೆ ಎಂದು ಎಲ್ಲಿಯೂ ಹೇಳಿಲ್ಲ. ಯಾವುದೇ ಕಾಂಗ್ರೆಸ್‌‍ ಶಾಸಕರನ್ನೂ ಸಹ ಭೇಟಿಯಾಗಿಲ್ಲ. ಸಿಎಂ ಸೀಟ್‌ಗಾಗಿ ಅವರ ಪಕ್ಷದಲ್ಲೇ ಮ್ಯೂಸಿಕ್‌ ಅಂಡ್‌ ಚೇರ್‌ ನಡೆಯುತ್ತಿದೆ ಎಂದು ಟೀಕಿಸಿದರು.
ನೀರಿನ ಬಿಲ್‌ ದರ ಹೆಚ್ಚಿಸಲು ಮುಂದಾಗಿದ್ದಾರೆ. ಜನ ವಿರೋಧದ ನಡುವೆಯೂ ನೀರಿನ ಬಿಲ್‌ ದರ ಹೆಚ್ಚಿಸಲು ಮುಂದಾಗಿರುವುದು ಸಂವಿಧಾನ ವಿರೋಧ ತಾನೆ ಎಂದು ಪ್ರಶ್ನಿಸಿದರು. ಸಾರ್ವಜನಿಕರನ್ನು ಹಿಯಾಳಿಸಿದರೆ ಕಾಂಗ್ರೆಸ್‌‍ಗೆ ತಕ್ಕ ಪಾಠ ಕಲಿಸುತ್ತಾರೆ. ಬೆಂಗಳೂರಿನ ಜನರ ಬಗ್ಗೆ ಮಾತನಾಡುವ ಹಕ್ಕು ಕಾಂಗ್ರೆಸ್‌‍ಗೆ ಇಲ್ಲ. ನೀರು ಕೊಡುವುದು ಸರ್ಕಾರದ ಕರ್ತವ್ಯ ಈಗ ಏರಿಕೆ ಮಾಡಲು ಮುಂದಾಗಿರುವ ನಿಮಗೆ ನಾಚಿಕೆಯಾಗಬೇಕು ಎಂದು ತರಾಟೆಗೆ ತೆಗೆದುಕೊಂಡರು. ಕಾಂಗ್ರೆಸ್‌‍ನವರು ದಾರಿಯಲ್ಲಿ ರಾಜಪಾಲರ ಬಗ್ಗೆ ಏಕವಚದಲ್ಲಿ ಮಾತಾಡಿದ್ದಾರೆ. ಮಂತ್ರಿಗಳು ಅಗೌರವವಾಗಿ ಮಾತಾಡಿದ್ದು ಸರಿಯಲ್ಲ ಎಂದು ಆಕ್ಷೇಪಿಸಿದರು.

Leave a Reply

Your email address will not be published. Required fields are marked *

error: Content is protected !!