ಉದಯವಾಹಿನಿ, ಗದಗ: ಉತ್ತಮ ರಸ್ತೆ ಸಂಪರ್ಕ ಜಾಲವು ಅಭಿವೃದ್ಧಿಗೆ ವೇಗ ನೀಡುತ್ತದೆ. ಪ್ರವಾಸೋದ್ಯಮ ಅಭಿವೃದ್ಧಿ, ಕಡಿಮೆ ವೆಚ್ಚದಲ್ಲಿ ಸರಕು, ಸಾಗಣೆ, ಉದ್ಯಮಗಳ ಬೆಳವಣಿಗೆಗೆ ಶಕ್ತಿಮದ್ದಿನಂತೆ ಕೆಲಸ ನಿರ್ವಹಿಸುತ್ತದೆ. ಆದರೆ, ಗದಗ ಜಿಲ್ಲೆಯ ರಸ್ತೆಯ ಸ್ಥಿತಿಗತಿಗಳು ಅಷ್ಟೇನೂ ಆಶಾದಾಯಕವಾಗಿಲ್ಲ.ಅದರಲ್ಲೂ ಗ್ರಾಮೀಣ ಪ್ರದೇಶದಿಂದ ಪಟ್ಟಣ, ನಗರ ಸಂಪರ್ಕಿಸುವ ರಸ್ತೆಗಳ ಜಾಲ ಅಮೂಲಾಗ್ರವಾಗಿ ಸುಧಾರಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.ಗದಗ ನಗರದಿಂದ ಹುಬ್ಬಳ್ಳಿ, ಹೊಸಪೇಟೆ, ಮುಂಡರಗಿ, ರೋಣ ಸಂಪರ್ಕಿಸುವ ರಸ್ತೆ ಮಾರ್ಗಗಳು ಉತ್ತಮವಾಗಿವೆ. ಆದರೆ, ಗದಗ- ಲಕ್ಷ್ಮೇಶ್ವರ ರಸ್ತೆಯ ಸ್ಥಿತಿ ಸದ್ಯಕ್ಕೆ ಭಯಾನಕವಾಗಿದೆ.
ಅರ್ಧ, ಮುಕ್ಕಾಲು ಗಂಟೆಯಲ್ಲಿ ತಲುಪಬಹುದಾದ ಸ್ಥಳಕ್ಕೆ ಕನಿಷ್ಠ ಒಂದೂವರೆ ಗಂಟೆ ಹಿಡಿಯುತ್ತಿದೆ. ನಾಗಾವಿ ಕ್ರಾಸ್‌ನಿಂದ ಲಕ್ಷ್ಮೇಶ್ವರ ತಲುಪುವ ವೇಳೆಗೆ ವಾಹನಗಳು ನೂರಾರು ತಗ್ಗು ಗುಂಡಿಗಳನ್ನು ಇಳಿದು ಹತ್ತಬೇಕು. ಹೀಗೆ ವಾಹನಗಳ ಚಕ್ರಗಳು ಗುಂಡಿ ಹತ್ತಿ ಇಳಿಯುವ ಸಂದರ್ಭದಲ್ಲಿ ಪ್ರಯಾಣಿಕರ ಮೈಮೂಳೆಗಳಿಗೆ ಸಾಕಷ್ಟು ನೋವುಂಟಾಗುತ್ತದೆ. ವೃದ್ಧರು, ಗರ್ಭಿಣಿಯರು, ಬಾಣಂತಿಯರಿಗೆ ಈ ರಸ್ತೆ ದುಃಸ್ವಪ್ನವಾಗಿ ಕಾಡುತ್ತಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ತಕ್ಷಣವೇ ಈ ರಸ್ತೆ ದುರಸ್ತಿಗೆ ಕ್ರಮವಹಿಸಬೇಕು ಎಂದು ಪ್ರಯಾಣಿಕರು ಆಗ್ರಹಿಸುತ್ತಾರೆ.
ಗದಗ- ಲಕ್ಷ್ಮೇಶ್ವರ ರಸ್ತೆ ಇಷ್ಟೊಂದು ಹದಗೆಡಲು ಕಾರಣವೇನು?: ಲಕ್ಷ್ಮೇಶ್ವರ, ಶಿರಹಟ್ಟಿ ಮತ್ತು ಮುಂಡರಗಿ ತಾಲ್ಲೂಕಿನಲ್ಲಿ ಮರಳು ಗಣಿಗಾರಿಕೆ, ಕ್ರಷರ್ ಚಟುವಟಿಕೆಗಳು ಜೋರಾಗಿವೆ. ಜಲ್ಲಿಕಲ್ಲು, ಎಂ- ಸ್ಯಾಂಡ್, ಮರಳನ್ನು ನಿಯಮಕ್ಕೂ ಮೀರಿ ತುಂಬಿಕೊಂಡ ಅತಿಭಾರದ ನೂರಾರು ಟಿಪ್ಪರ್‌ಗಳು ಈ ರಸ್ತೆಯಲ್ಲಿ ರಾತ್ರಿ- ಬೆಳಿಗ್ಗೆ ಎನ್ನದೇ ಸಂಚರಿಸುತ್ತವೆ. ಇದೇ ಕಾರಣಕ್ಕಾಗಿ ಈ ನಿರ್ದಿಷ್ಟ ವ್ಯಾಪ್ತಿಯಲ್ಲಿನ ರಸ್ತೆಗಳು ತೀವ್ರ ಹದಗೆಟ್ಟಿವೆ ಎನ್ನುತ್ತಾರೆ.
