ಉದಯವಾಹಿನಿ,ಕಲಬುರಗಿ : ಅಸ್ನಾ ಚಂಡಮಾರುತದಿಂದ ಕಲಬುರಗಿ, ಯಾದಗಿರಿ, ಬೀದರ್, ವಿಜಯಪುರ ಜಿಲ್ಲೆಗಳಲ್ಲಿ ಭಾನುವಾರ ಭಾರೀ ಮಳೆಯಾಗಿದ್ದು, ಹಲವೆಡೆ ಮನೆ ಕುಸಿದಿವೆ. ಹಳ್ಳಕೊಳ್ಳಗಳು ತುಂಬಿ ಹರಿದಿದ್ದು, ಕೆಲವು ಕಡೆ ಸಂಪರ್ಕ ಕಡಿತವಾಗಿದೆ. ಇಂದು ಕೆಲವು ಕಡೆ ಮಳೆ ಮುಂದುವರೆದಿದೆ.
ಭಾನುವಾರ ಕಲಬುರಗಿ ನಗರವು ಸೇರಿದಂತೆ ಜಿಲ್ಲೆಯಾದ್ಯಂತ ಭಾರಿ ಮಳೆಯಾಗಿದ್ದು, ಸೇಡಂ 9, ಕಲಬುರಗಿ 8, ಕಮಲಾಪುರ 8, ಚಿತ್ತಾಪುರ 7, ಚಿಂಚೋಳಿ, ಜೇವರ್ಗಿ 6, ನೆಲೋಗಿ 5, ಖಜೂರಿ 3, ಯಡ್ರಾಮಿಯಲ್ಲಿ 2 ಸೆಂಟಿ ಮೀಟರ್ ಮಳೆಯಾಗಿದೆ. ಶಹಾಬಾದ ಚಿತ್ತಾಪುರ ಮಾರ್ಗದಲ್ಲಿ ಬರುವ ಕಾಗಿಣಾ ನದಿ ತುಂಬಿ ಅಪಾರ ಪ್ರಮಾಣದ ನೀರು ಹೊಲಗದ್ದೆಗಳಿಗೆ ನುಸುಳಿದ್ದರಿಂದ ಹೊಲಗದ್ದೆಗಳು ಜಲಾವೃತವಾಗಿವೆ.
ಭಾನುವಾರ ಸುರಿದ ಭಾರೀ ಮಳೆಗೆ ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಎಲೆನಾವದಗಿ ಗ್ರಾಮದಲ್ಲಿ 4 ಮನೆ, ಕೊಡಹಂಗರಗಾ ಗ್ರಾಮದಲ್ಲಿ 3 ಮನೆ, ಕಣಮಸ್ ಗ್ರಾಮದಲ್ಲಿ 2 ಮನೆ, ಚಿತಲಿ ಗ್ರಾಮದಲ್ಲಿ 1 ಮನೆ ಭಾಗಶ: ಕುಸಿದು ಹಾನಿಯಾಗಿದ್ದು, ನರೋಣಾ ಹೋಬಳಿಯ ಕೆರಿ ಅಂಬಲಗಾ ಗ್ರಾಮದಲ್ಲಿ 2 ಮನೆಗಳು ಭಾಗಶ: ಬಿದ್ದಿವೆ. ಚಿಂಚನಸೂರ ಗ್ರಾಮದಲ್ಲೂ ಸಹ ಮನೆಗಳು ಭಾಗಶ: ಹಾನಿಯಾಗಿವೆ. ಮಳೆಯಿಂದಾಗಿ ಕೆರೆ ಹಳ್ಳಗಳಲ್ಲಿ ನೀರು ಉಕ್ಕಿ ಹರಿಯತೊಡಗಿದ್ದು, ಯಾವುದೇ ಜೀವಹಾನಿಯಾದ ಬಗ್ಗೆ ವರದಿಯಾಗಿಲ್ಲ. ಮಳೆಯಿಂದಾಗಿ ತೊಗರಿ, ಉದ್ದು, ಹೆಸರು ಬೆಳೆಗಳಿಗೆ ಹಾನಿಯುಂಟಾಗಿದ್ದು, ರೈತರಿಗೆ ಸಂಕಷ್ಟ ಎದುರಾಗಿದೆ. ಮಳೆ ನೀರಿನ ಪ್ರವಾಹದಿಂದಾಗಿ ಸಾಲೇಗಾಂವ ಗ್ರಾಮದಲ್ಲಿನ ಕೆರೆಯ ನೀರಿನ ಪ್ರವಾಹ ಹಿನ್ನೆಲೆಯಲ್ಲಿ ದಿನವಿಡೀ ಗ್ರಾಮ ಸಂಪರ್ಕ ಕಡಿತಗೊಂಡಿತ್ತು.
