ಉದಯವಾಹಿನಿ, ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಸಂಪೂರ್ಣ ಮುಗಿದಿದ್ದು, ಇಂದು ನ್ಯಾಯಾಲಯಕ್ಕೆ ವಾಟರ್ ಟೈಟ್ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣದಲ್ಲಿ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆದಿದೆ. ಸಾಕಷ್ಟು ತಾಂತ್ರಿಕ ಸಾಕ್ಷ್ಯಗಳು ದೊರೆತಿದ್ದು, ಅದನ್ನು ತನಿಖೆಯಲ್ಲಿ ಅಳವಡಿಸಿಕೊಳ್ಳಲಾಗಿದೆ. ವೈದ್ಯರು, ಎಂಜಿನಿಯರ್, ಆರ್ಟಿಓಗಳು, ತಹಸೀಲ್ದಾರರು ಹಾಗೂ 56 ಪೊಲೀಸರನ್ನು ಸಾಕ್ಷಿಯನ್ನಾಗಿ ಮಾಡಲಾಗಿದೆ. ಒಟ್ಟು 231 ಒಟ್ಟು ಸಾಕ್ಷಿದಾರರನ್ನು ದೋಷಾರೋಪಣಾ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ ಎಂದರು.
ಪ್ರಕರಣ ಸಂಬಂಧ ಈಗಾಗಲೇ 17 ಮಂದಿಯನ್ನು ಬಂಧಿಸಲಾಗಿದೆ. ಬೆಂಗಳೂರಿನ ಎಫ್ಎಸ್ಎಲ್ನಿಂದ ಎಲ್ಲಾ ವರದಿಗಳು ಬಂದಿವೆ. ತಾಂತ್ರಿಕ ವಿಶ್ಲೇಷಣೆಗಾಗಿ ಕೆಲವು ಎಲೆಕ್ಟ್ರಾನಿಕ್ ಸಲಕರಣೆಗಳನ್ನು ಹೈದರಾಬಾದ್ನ ಸಿಎಫ್ಎಸ್ಎಲ್ ಕಳುಹಿಸಲಾಗಿತ್ತು. ಅಲ್ಲಿನ ವರದಿ ಭಾಗಶಃ ಬಂದಿದ್ದು, ಸಂಪೂರ್ಣ ಬಂದಿರಲಿಲ್ಲ, ಲಭ್ಯ ಇರುವ ಮಾಹಿತಿ ಆಧರಿಸಿ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿದೆ ಎಂದು ತಿಳಿಸಿದರು. ನ್ಯಾಯಾಲಯದಲ್ಲಿ ಈ ಪ್ರಕರಣದ ಬಗ್ಗೆ ಸರ್ಕಾರದ ಪರವಾಗಿ ವಾದಿಸಲು ವಿಶೇಷ ಅಭಿಯೋಜಕರನ್ನು ನೇಮಿಸಲಾಗಿದೆ. ಅವರ ಅಣತಿಯಂತೆ ದೋಷಾರೋಪಣ ಪಟ್ಟಿ ಸಿದ್ಧಪಡಿಸಲಾಗಿದೆ. ಸಾಮಾಜಿಕ ಜಾಲತಾಣದಿಂದಲೂ ಸಾಕಷ್ಟು ತಾಂತ್ರಿಕ ಸಾಕ್ಷ್ಯಗಳು ಲಭ್ಯವಾಗಿದ್ದು, ಅವನ್ನು ತನಿಖೆಯಲ್ಲಿ ಬಳಸಿಕೊಳ್ಳಲಾಗಿದೆ.
