ಉದಯವಾಹಿನಿ, ವಿಜಯವಾಡ: ಆಂಧ್ರಪ್ರದೇಶದಲ್ಲಿ ಭಾರಿ ಮಳೆಯಾಗಿದ್ದು, ವಿಜಯವಾಡ ಸೇರಿದಂತೆ ವಿವಿಧೆಡೆ ಪ್ರವಾಹ ಏರ್ಪಟ್ಟಿದ್ದು, ಜನ ಜಾನುವಾರು ತತ್ತರಿಸಿ ಹೋಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಹೆಲಿಕಾಪ್ಟರ್, ಡ್ರೋನ್‌ಗಳ ಸಹಾಯದಿಂದ ಆಹಾರ ಪದಾರ್ಥಗಳನ್ನು ಪೂರೈಸುತ್ತದೆ. ವಿಜಯವಾಡದಲ್ಲಿ ಆಹಾರಕ್ಕಾಗಿ ಕೆಸರಿನಲ್ಲಿ ಜನ ಮುಗಿಬೀಳುವ ದೃಶ್ಯ ಮನಕಲಕುವಂತಿದ್ದು, ಶಾಕಿಂಗ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಜಯವಾಡ ಸಿಂಗ್ ನಗರದಲ್ಲಿ ಬಹುತೇಕ ಮನೆಗಳು ಜಲಾವೃತವಾಗಿದ್ದು, ಮೈದಾನವೊಂದರಲ್ಲಿ ಹೆಲಿಕಾಪ್ಟರ್‌ನಿಂದ ಆಹಾರ ಪೊಟ್ಟಣಗಳನ್ನು ಕೆಳಗೆ ಎಸೆಯಲಾಯಿತು. ಆದರೆ ಮಳೆಗೆ ಮೈದಾನ ಕೆಸರುಮಯವಾಗಿದ್ದು, ಜನರು ನೂಕುನುಗ್ಗಲು ಉಂಟಾಯಿತು. ಕೆಲವರು ಪೊಟ್ಟಣಗಳನ್ನು ಕಸಿದುಕೊಳ್ಳುತ್ತಿರುವುದು, ಮಹಿಳೆಯರು ಮತ್ತು ಮಕ್ಕಳು ಬೇಡಿಕೊಳ್ಳುತ್ತಿದ್ದುದು ಕಂಡು ಬಂದಿತು. ಈ ಹೃದಯ ವಿದ್ರಾವಕ ಘಟನೆಯನ್ನು ಅಲ್ಲಿದ್ದ ಕೆಲವರು ಮೊಬೈಲ್ಗಳಲ್ಲಿ ವೀಡಿಯೋ ಮಾಡಿದ್ದು, ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಮರುಗುತ್ತಿದ್ದಾರೆ.
