ಉದಯವಾಹಿನಿ, ಚಿಂತಾಮಣಿ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆ ರೂಪಿಸಬೇಕು ಎಂದು ಎರಡು ದಶಕಗಳಿಂದ ಹೋರಾಟ ನಡೆಯುತ್ತಿದೆ. ಆದರೆ ನೀರು ಮಾತ್ರ ಹರಿದಿಲ್ಲ.ಹೋರಾಟಗಾರರ ತೀವ್ರ ಒತ್ತಡಗಳಿಂದ ಬೆಂಗಳೂರಿನ ತ್ಯಾಜ್ಯ ನೀರನ್ನು ಶುದ್ಧೀಕರಿಸಿ ಹರಿಸುವ ಕೆ.ಸಿ.ವ್ಯಾಲಿ ಮತ್ತು ಎಚ್.ಎನ್.ವ್ಯಾಲಿ ಯೋಜನೆಯನ್ನು ರೂಪಿಸಲಾಗಿದೆ.
ಈ ಯೋಜನೆಗಳ ನೀರು ಸಹ ಚಿಂತಾಮಣಿ ತಾಲ್ಲೂಕಿಗೆ ಕನಸಾಗಿದೆ.
ಶಾಶ್ವತ ನೀರಾವರಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ತಾಲ್ಲೂಕು ಪ್ರತಿಫಲ ಪಡೆಯುವಲ್ಲಿ ವಂಚನೆಗೆ ಒಳಗಾಗಿದೆ. ಭೌತಿಕ ವಿಸ್ತಾರದಲ್ಲಿ ಹಾಗೂ ಜನಸಂಖ್ಯೆಯಲ್ಲಿ ಹೆಚ್ಚಿನ ಪಾಲನ್ನು ಹೊಂದಿರುವ ತಾಲ್ಲೂಕು ಅಭಿವೃದ್ಧಿ ಯೋಜನೆಗಳಲ್ಲಿ ವಂಚನೆಗೆ ಒಳಗಾಗಿದೆ ಎಂಬ ಕೊರಗು ಜನರಲ್ಲಿ ಮಡುಗಟ್ಟಿದೆ.
ಕೆ.ಸಿ.ವ್ಯಾಲಿ ನೀರು ಕೋಲಾರ, ಮುಳಬಾಗಿಲು, ಶ್ರೀನಿವಾಸಪುರ ತಾಲ್ಲೂಕುಗಳಿಗೆ ಹರಿಯುತ್ತಿದೆ. ಎಚ್.ಎನ್. ವ್ಯಾಲಿ ನೀರು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹರಿಯುತ್ತಿದೆ. ಚಿಂತಾಮಣಿ ತಾಲ್ಲೂಕಿನಲ್ಲಿ ಮೊದಲ ಹಂತದ ಯೋಜನೆಯಲ್ಲಿ ಕುರುಟಹಳ್ಳಿ, ಮೂಡಲಚಿಂತಲಹಳ್ಳಿ, ಹಾದಿಗೆರೆ, ಆನೂರು, ದಂಡುಪಾಳ್ಯ ಕೆರೆಗಳಿಗೆ ಸ್ವಲ್ಪದಿನ ನೀರು ಹರಿದಿತ್ತು. ಕೆಲವೇ ದಿನಗಳಲ್ಲಿ ಸ್ಥಗಿತಗೊಂಡು ವರ್ಷಗಳೇ ಕಳೆದಿವೆ. ಚಿಂತಾಮಣಿ ತಾಲ್ಲೂಕಿಗೆ ಒಂದು ಹನಿ ನೀರು ಹರಿಯುತ್ತಿಲ್ಲ.
ಚಿಂತಾಮಣಿ ತಾಲ್ಲೂಕಿನಲ್ಲಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ 546 ಹಾಗೂ ಸಣ್ಣ ನೀರಾವರಿ ಇಲಾಖೆ ಅಡಿಯಲ್ಲಿ 19 ಸೇರಿ ಒಟ್ಟು 565 ಕೆರೆಗಳಿವೆ. ನಗರಕ್ಕೆ ಕುಡಿಯುವ ನೀರನ್ನು ಪೂರೈಸಲು ಯೋಜನೆಯನ್ನು ಕೈಗೊಂಡಿರುವ ಭಕ್ತರಹಳ್ಳಿ-ಅರಸೀಕೆರೆ ಒಂದನ್ನು ಹೊರತುಪಡಿಸಿ ಯಾವುದರಲ್ಲೂ ನೀರಿಲ್ಲ. ಕೆರೆ ಒಣಗಿಹೋಗಿವೆ. ಬಹುತೇಕ ಕೆರೆಗಳಲ್ಲಿ ಮರಗಿಡಗಳು ಬೆಳೆದಿದೆ.
