ಉದಯವಾಹಿನಿ, ಬೆಂಗಳೂರು: ಗೌರಿ-ಗಣೇಶ ಹಬ್ಬಕ್ಕೆ ರಾಜ್ಯದ ಜನತೆ ಸಜ್ಜಾಗುತ್ತಿದ್ದು, ಹಬ್ಬಕ್ಕೆ ಬೇಕಾಗುವ ಹೂ-ಹಣ್ಣು, ಪೂಜಾ ಸಾಮಗ್ರಿಗಳು, ಗೌರಿ-ಗಣೇಶ ಮೂರ್ತಿಗಳು ಸೇರಿದಂತೆ ಅಗತ್ಯ ವಸ್ತುಗಳ ಖರೀದಿ ಭರಾಟೆ ಜೋರಾಗಿದೆ. ವರಮಹಾಲಕ್ಷ್ಮಿ ಹಬ್ಬದ ವೇಳೆ ಗಗನಕ್ಕೇರಿದ ಹೂ-ಹಣ್ಣಿನ ಬೆಲೆ ಇದೀಗ ಸ್ವಲ್ಪ ಇಳಿಕೆ ಕಂಡಿದೆ. ಆದರೆ ತರಕಾರಿ ಬೆಲೆ ಹೆಚ್ಚಾಗಿದ್ದು, ಗ್ರಾಹಕರಿಗೆ ಈ ಬಾರಿ ಬೆಲೆ ಏರಿಕೆಯ ಬಿಸಿ ಅಷ್ಟೇನೂ ತಟ್ಟಿಲ್ಲ.
ಬೆಂಗಳೂರಿನ ಕೆ.ಆರ್.ಮಾರುಕಟ್ಟೆ, ಯಶವಂತಪುರ, ದಾಸನಪುರ, ಸೀಗೆಹಳ್ಳಿ, ಮಲ್ಲೇಶ್ವರಂ ಸೇರಿದಂತೆ ಜಿಲ್ಲೆ ಹಾಗೂ ತಾಲೂಕು ಮಾರುಕಟ್ಟೆಗಳಲ್ಲಿ ಮುಂಜಾನೆಯೇ ಜನರು ಜಮಾಯಿಸಿ ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಕೊಳ್ಳುತ್ತಿದ್ದ ದೃಶ್ಯಗಳು ಕಂಡುಬಂದವು.
ಕನಕಾಂಬರ ಈಗಲೂ ದುಬಾರಿ : ವರಮಹಾಲಕ್ಷ್ಮಿ ಹಬ್ಬದಲ್ಲಿ ಹೆಚ್ಚಾಗಿದ್ದ ಹೂವಿನ ಬೆಲೆ ಇದೀಗ ತುಸು ಕಡಿಮೆಯಾಗಿದೆ. ಆದರೆ ಕನಕಾಂಬರ ಮಾತ್ರ ಅದರ ಹೆಸರಿಗೆ ತಕ್ಕಂತೆ ಅಂಬರದಲ್ಲಿದೆ. ಕೆಜಿಗೆ 2,500 ರೂ.ಗೆ ಮಾರಾಟವಾಗುತ್ತಿದೆ. ಮಲ್ಲಿಗೆ ಪ್ರತಿ ಕೆಜಿಗೆ 300 ರಿಂದ 600, ಗುಲಾಬಿ 150 ರಿಂದ 200, ಸೇವಂತಿಗೆ 150 ರಿಂದ 200, ಸುಗಂಧರಾಜ 100 ರಿಂದ 200, ಮಾರಿಗೋಲ್ಡ್ 200 ರೂ.ಗಳಿಗೆ ಮಾರಾಟವಾಗುತ್ತಿದೆ.ಗರಿಕೆ, ಬೇಲದಹಣ್ಣು, ಎಕ್ಕದ ಹೂವಿನ ಹಾರಕ್ಕೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದ್ದು, ಬಾಳೆಕಂದು, ಮಾವಿನಸೊಪ್ಪು ಮಾರಾಟ ಜೋರಾಗಿದೆ. ಜೋಡಿ ಬಾಳೆಕಂದಿಗೆ 60 ರೂ., ಮಾವಿನಸೊಪ್ಪಿನ ಕಟ್ಟಿಗೆ 20 ರೂ., ಗರಿಕೆ 30 ರೂ., ಬೆಲೆ ಇದೆ.
