ಉದಯವಾಹಿನಿ, ದೊಡ್ಡಬಳ್ಳಾಪುರ: ಪ್ರತಿ ನಿತ್ಯ ತ್ಯಾಜ್ಯ ಸಂಗ್ರಹಿಸಿ, ಸಾವಯವ ಪದಾರ್ಥ ಸೇರಿಸಿ ಜೋಡಿ ತೊಟ್ಟಿ ವಿಧಾನದ ಮೂಲಕ ಉತ್ತಮ ಗುಣಮಟ್ಟದ ಸುಧಾರಿತ ಕಾಂಪೋಸ್ಟ್ ತಯಾರಿಸಬಹುದು ಎಂದು ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಭಾಗದ ವಿಜ್ಞಾನಿ ಡಾ.ಪಿ.ವೀರನಾಗಪ್ಪ ಹೇಳಿದರು.ತಾಲ್ಲೂಕಿನ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ರೈತ ಮಹಿಳೆಯರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ‘ವೇಸ್ಟ್ ಡಿಕಾಂಪೋಸರ್‌’ ಎಂಬ ಸೂಕ್ಷ್ಮಜೀವಿಯನ್ನು ಬಿಡುಗಡೆ ಮಾಡಿದೆ. ವಿವಿಧ ರೀತಿಯ ಕಾಂಪೋಸ್ಟ್ ಅಳವಡಿಕೆ ಪದ್ಧತಿಯಲ್ಲಿ ಇದನ್ನು ಬಳಸುವುದರಿಂದ ತ್ವರಿತವಾಗಿ ಗೊಬ್ಬರ ಉತ್ಪಾದನೆ ಆಗುತ್ತದೆ. ತ್ಯಾಜ್ಯದ ಜೊತೆಗೆ ಸಾವಯವ ಪದಾರ್ಥ ಸೇರಿಸಿ ಅರೆಬರೆ ಕೊಳೆತ ತ್ಯಾಜ್ಯವನ್ನು ಎರೆಹುಳು ಗೊಬ್ಬರ ತಯಾರಿಕೆಯ ತೊಟ್ಟಿಗಳಲ್ಲಿ ತುಂಬಬೇಕು.‌ ಇದರಿಂದ ಸುಧಾರಿತ ಕಾಂಪೋಸ್ಟ್‌ ತಯಾರಾಗುತ್ತದೆ ಎಂದು ಹೇಳಿದರು.
ಕೃಷಿಯಲ್ಲಿ ಕಾಂಪೋಸ್ಟ್ ಕಪ್ಪು ಬಂಗಾರವಾಗಿ ಬಳಕೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಸಾವಯವ ಗೊಬ್ಬರಗಳಿಗೆ ಅಧಿಕ ಬೇಡಿಕೆ ದೊರೆಯಲಿದೆ. ಇದರಿಂದ ರೈತರು ಕಾಂಪೋಸ್ಟ್ ಉತ್ಪಾದನೆ ಉದ್ಯಮಶೀಲ ಚಟುವಟಿಕೆಯಾಗಿ ಅಳವಡಿಸಿಕೊಂಡು ಲಾಭಗಳಿಸಬಹುದು ಎಂದರು. ಸಾವಯವ ಗೊಬ್ಬರ ಬಳಕೆಯಿಂದ ಮಣ್ಣು ಆರೋಗ್ಯ ಕಾಯ್ದುಕೊಳ್ಳುವ ಜತೆಗೆ ಸುಸ್ಥಿರ ಇಳುವರಿ ಪಡೆಯಬಹುದು. ಪರಿಸರ ಮಾಲಿನ್ಯ ಕಡಿಮೆ ಮಾಡಿದಂತಾಗುತ್ತದೆ ಎಂದರು.

 

Leave a Reply

Your email address will not be published. Required fields are marked *

error: Content is protected !!