ಉದಯವಾಹಿನಿ, ಆಳಂದ: ಪಟ್ಟಣದಲ್ಲಿ ಸೇಡಂನ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಂಸ್ಥೆಗೆ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪಟ್ಟಣಕ್ಕೆ ಕಲ್ಯಾಣ ಕರ್ನಾಟಕದ ವಿಕಾಸ ಯಾತ್ರೆಯನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು.
ಸೇಡಂನ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಸ್ವರ್ಣ ಜಯಂತಿ, ವಿಕಾಸ ಅಕಾಡೆಮಿ ಮತ್ತು ಭಾರತ ವಿಕಾಸ ಸಂಗಮ ಪ್ರಾರಂಭವಾಗಿ 21 ವರ್ಷಗಳಾದ ಹಿನ್ನೆಲೆಯಲ್ಲಿ 7ನೇ ಭಾರತೀಯ ಸಂಸ್ಕøತಿ ಉತ್ಸವ ಎಂಬ ಬೃಹತ್ ಸಮಾವೇಶವನ್ನು ಒಟ್ಟು 240 ಎಕರೆ ಪ್ರದೇಶದಲ್ಲಿ ಪ್ರಕೃತಿ ನಗರ ಬೀರನಹಳ್ಳಿ, ಸೇಡಂ- ಕಲಬುರಗಿ ರಸ್ತೆಯಲ್ಲಿ ಜನೇವರಿ 29ರಿಂದ ಫೆಬ್ರುವರಿ 6, 2025ರ ವರೆಗೆ ಆಯೋಜಿಸಲಾಗಿದೆ ಎಂದು ಸೇಡಂನ ಸದಾಶಿವ ಮಹಾಸ್ವಾಮೀಜಿ ಹೇಳಿದರು.
ಆಳಂದ ಪಟ್ಟಣದಲ್ಲಿ ನಡೆದ ವಿಕಾಸ ಪಥ ರಥಯಾತ್ರೆಯ ನಂತರ ಜರುಗಿದ ಸಭೆಯಲ್ಲಿ ಮಾತನಾಡಿದ ಅವರು, ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆಗೆ 50 ವರ್ಷಗಳು ಪೂರೈಸಿವೆ. ಈ ಸುಸಂದರ್ಭದಲ್ಲಿ 2025ರ ಜನೇವರಿಯಲ್ಲಿ ಭಾರತೀಯ ಸಂಸ್ಕøತಿ ಉತ್ಸವ ಹಮ್ಮಿಕೊಳ್ಳಲಾಗಿದ್ದು, ಜ.29ರಿಂದ ಫೆ.6ರ ವರೆಗೆ ಈ ಉತ್ಸವ ನಡೆಯಲಿದೆ. ಕೃಷಿ, ಜ್ಞಾನ, ವಿಜ್ಞಾನ, ಕಲಾ, ಮಕ್ಕಳ, ಉದ್ಯಮಿ, ಸುಜನ್ಯ, ಸಾಂಸ್ಕೃತಿಕ, ಯೋಗ ತರಬೇತಿ ಕಾರ್ಯಕ್ರಮಗಳು 240 ಎಕರೆ ಪ್ರದೇಶದಲ್ಲಿ ಆಯೋಜಿಸಲಾಗಿದೆ. ಇದರಲ್ಲಿ 5 ಸಾವಿರ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಗಣ್ಯರು, 5 ಸಾವಿರಾರು ಕಲಾವಿದರು ಸೇರಿದಂತೆ ಕಾರ್ಯಕ್ರಮದಲ್ಲಿ 30 ಲಕ್ಷ ಜನ ಸೇರುವ ನಿರೀಕ್ಷೆ ಇದೆ ಎಂದರು.
ಒಂಬತ್ತು ದಿನಗಳ ಕಾಲ ನಡೆಯುವ ಈ ಉತ್ಸವವು ವಿವಿಧ ಕ್ಷೇತ್ರದಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ತಜ್ಞರನ್ನು / ಪರಿಣಿತರನ್ನು / ಸಂಪನ್ಮೂಲ ವ್ಯಕ್ತಿಗಳನ್ನು ಕಲ್ಯಾಣ ಕರ್ನಾಟಕದ ಶ್ರೀಸಾಮಾನ್ಯನಿಗಲ್ಲದೆ, ಅಖಿಲ ಕರ್ನಾಟಕ ಮತ್ತು ಅಖಂಡ ಭಾರತದ ಸಮಗ್ರ ಜನಸಮುದಾಯಕ್ಕೂ ಪರಿಚಯಿಸುವುದಲ್ಲದೆ, ಅವರೊಂದಿಗೆ ನೇರ ಸಂವಾದಕ್ಕೂ ಅವಕಾಶ ಕಲ್ಪಿಸುತ್ತದೆ. ಸಂವಾದ ಮತ್ತು ಚರ್ಚೆಯ ಮೂಲಕ ವಿವಿಧ ವಿಷಯಗಳ ಬಗ್ಗೆ ತಮ್ಮ ಜ್ಞಾನವೃದ್ಧಿಯನ್ನು ಮಾಡಿಕೊಳ್ಳುವ ಅವಕಾಶವನ್ನು ಈ ಮಹಾಸಂಗಮ ಎಲ್ಲರಿಗೂ ದೊರಕಿಸಲಿದೆ. ವಿವಿಧ ವಿಷಯಗಳಡಿಯಲ್ಲಿ ಪ್ರದರ್ಶನ, ವಿವಿಧ ಕಾರ್ಯಕ್ರಮ ಹಾಗೂ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕೃಷಿ ಲೋಕ – 11 ಎಕರೆ ವಿಸ್ತೀರ್ಣದಲ್ಲಿ, ವಿಜ್ಞಾನ ಮತ್ತು ತಂತ್ರಜ್ಞಾನ ಲೋಕ 6 ಎಕರೆ, ಸೃಜನ ಲೋಕ – 8 ಎಕರೆ, ಜ್ಞಾನ ಲೋಕ 24 ಎಕರೆ, ಮಕ್ಕಳ ಲೋಕ – 2 ಎಕರೆ, ವ್ಯವಹಾರ ಲೋಕ 8 ಎಕರೆ, ಕಲೆ ಮತ್ತು ಸಾಂಸ್ಕೃತಿಕ ಲೋಕ – 2 ಎಕರೆ ವಿಸ್ತೀರ್ಣದಲ್ಲಿ ಆಯೋಜಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!