ಉದಯವಾಹಿನಿ, ಬೀದರ: ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ರೈತರ ಬೆಳೆ ಹಾನಿಯಾಗಿದ್ದು ಇದಕ್ಕೆ ಸರ್ಕಾರದಿಂದ ನಿಯಮಾನುಸಾರ ಪರಿಹಾರ ನೀಡಲಾಗುವುದು ಎಂದು ಅರಣ್ಯ. ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ. ಖಂಡ್ರೆ ಹೇಳಿದರು.
ಅವರು ಗುರುವಾರ ಮಳೆಯಿಂದ ಹಾನಿಗೊಳಗಾದ ಬೀದರ ತಾಲ್ಲೂಕಿನ ಚಿಮಕೋಡ, ಮಾಳೆಗಾಂವ ಹಾಗೂ ಹಮೀಲಾಪು ಗ್ರಾಮದ ಹೊಲಗಳ ಬೆಳೆ ಹಾಗೂ ಮನೆಗಳನ್ನು ವೀಕ್ಷಿಸಿದ ನಂತರ ಮಾತನಾಡಿದರು.
ನಮ್ಮ ದೇಶದ ಬೆನ್ನೆಲಬು ರೈತ ಅನ್ನದಾತನಾಗಿದ್ದಾರೆ. ಅವರ ಸಂಕಷ್ಟದಲ್ಲಿ ನಾವಿದ್ದೆವೆ. ಮಾಂಜ್ರಾ ನದಿಯ ದಡದಲ್ಲಿರುವ ಚಿಮಕೋಡ ಗ್ರಾಮದ ರೈತರ ಜಮೀನುಗಳು ಪ್ರವಾಹದ ಸಂದರ್ಭದಲ್ಲಿ ಪದೇ-ಪದೇ ಹಾನಿಗೊಳಗಾಗುತ್ತವೆ ಇದಕ್ಕೆ ಶಾಶ್ವತ ಪರಿಹಾರ ನೀಡುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಮಳೆಯಿಂದ ಹಾನಿಯಾದ ಜಮೀನು ಹಾಗೂ ಮನೆಗಳಿಗೆ ಸರ್ಕಾರದ ಎನ್.ಡಿ.ಆರ್.ಎಫ್ ಹಾಗೂ ಎಸ್.ಡಿ. ಆರ್. ಎಫ್ ನಿಯಮಗಳ ಪ್ರಕಾರ ಪರಿಹಾರ ನೀಡಲಾಗುವುದು. ಜಿಲ್ಲಾಡಳಿತಕ್ಕೆ ಹಾನಿಯ ಮಾಹಿತಿ ಸಂಗ್ರಹಿಸಿ ಸರ್ಕಾರದ ಮಾನದಂಡಗಳ ಪ್ರಕಾರ ಪರಿಹಾ ರ ನೀಡಲು ಸೂಚಿಸಿದ್ದೆನೆ ಎಂದು ಹೇಳಿದರು. ಚಿಮಕೋಡ ಗ್ರಾಮದ ಮಾರುತಿ ತಂದೆ ತುಕಾರಾಂ. ಜಮೀನಿನಲ್ಲಿರುವ ಸೋಯಾ, ತೊಗರಿ, ಹೆಸರು ಬೆಳೆಗಳು ಹಾಗೂ ಗೌರಮ್ಮ ತಂದೆ ಝರೆಪ್ಪಾ ಜಮೀನಿನಲ್ಲಿರುವ ತೊಗರಿ, ಸೋಯಾ ಮತ್ತು ನರಸಪ್ಪ ಟೊಳ್ಳಿ ಇವರ ಜಮೀನಿನಲ್ಲಿರುವ ಸೋಯಾ ಮತ್ತು ತೊಗರಿ ಬೆಳೆಗಳು ಮಳೆಯಿಂದ ಹಾನಿಯಾದ ಜಮೀನುಗಳನ್ನು ವೀಕ್ಷಿಸಿದ ಸಚಿವರು ಹಾನಿಯ ನಿಖರ ಮಾಹಿತಿ ಸಂಗ್ರಹಿಸಿ ಅವರಿಗೆ ಆದಷ್ಟು ಬೇಗನೆ ಪರಿಹಾರ ನೀಡಬೇಕೆಂದು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
