ಉದಯವಾಹಿನಿ, ಬೆಂಗಳೂರು: ಪ್ರತಿವರ್ಷದಂತೆ ಈ ಬಾರಿಯೂ ಜೆ.ಪಿ ನಗರದ ಪುಟ್ಟೇನಹಳ್ಳಿ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ದೇವಸ್ಥಾನದಲ್ಲಿ ಗಣೇಶ ಚತುರ್ಥಿಯನ್ನು ವಿನೂತನ ಮತ್ತು ವೈಭವದಿಂದ ಆಚರಿಸಲಾಯಿತು. ಈ ಬಾರಿ ನಾಡಿನೆಲ್ಲೆಡೆ ಸಮೃದ್ಧ ಮಳೆಯಾಗಿರುವ ಸಂದರ್ಭದಲ್ಲಿ ಕೃಷಿ ಉತ್ಪನ್ನಗಳ ಮೂಲಕ ಗಣೇಶ ಮೂರ್ತಿಯನ್ನು ಅಲಂಕರಿಸಲಾಗಿದ್ದು, ವಿಶೇಷವಾಗಿ ರೈತ ಗಣೇಶೋತ್ಸವ ಆಚರಿಸಲಾಗಿದೆ. ದೇವಸ್ಥಾನದ ಟ್ರಸ್ಟಿ ರಾಮ್ ಮೋಹನ ರಾಜ್ ಈ ಕುರಿತು ಮಾಹಿತಿ ನೀಡಿ, ಜೋಳ, ತೆಂಗಿನಕಾಯಿ, ಬೇಲದ ಕಾಯಿ ಮೂಲಕ ಗಣೇಶ ಮೂರ್ತಿಯನ್ನು ಸಿಂಗರಿಸಲಾಗಿದೆ. ಗಣಪತಿಗೆ ಪ್ರಿಯವಾದ ವಸ್ತುಗಳನ್ನು ಬಳಸಲಾಗಿದೆ. ಬಳಸಿದ ಪ್ರತಿಯೊಂದು ಹಣ್ಣು, ತರಕಾರಿ, ವಸ್ತುಗಳನ್ನು ನಂತರ ಪ್ರಸಾದದ ಸ್ವರೂಪದಲ್ಲಿ ಭಕ್ತಾದಿಗಳಿಗೆ ವಿತರಿಸಲಾಗುವುದು ಎಂದರು.
ಪ್ರತಿವರ್ಷ ಹೊಸದೊಂದು ಥೀಮ್‌ನಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವ ಹಾಗೂ ವಿಶೇಷ ಆಲಂಕಾರವನ್ನು ಮಾಡುವ ಮೂಲಕ ದೇಶದ ಗಮನ ಸೆಳೆಯುತ್ತಿದ್ದ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ದೇವಸ್ಥಾನದಲ್ಲಿ ಈ ಬಾರಿ ೩೬ ಕ್ಕೂ ಹೆಚ್ಚು ವಿಧದ ಹಣ್ಣು ಹಾಗೂ ಹೂಗಳಿಂದ ವಿಶೇಷ ಅಲಂಕಾರ ಮಾಡಲಾಗಿದೆ. ಬೆಳಿಗ್ಗೆ ೯ ಗಂಟೆಯಿಂದ ವಿಶೇಷ ಪೂಜಾಕಾರ್ಯಕ್ರಮ ಆರಂಭವಾಯಿತು. ಹೂವು, ಹಣ್ಣುಗಳಿಂದ ಸಿಂಗರಿಸಲಾಗಿರುವ ದೇವಸ್ಥಾನ ಕಣ್ಣಿಗೆ ಹಬ್ಬವಾಗಿದೆ. ವಿಶೇಷ ಪೂಜೆಯ ಜೊತೆಗೆ ಪ್ರಸಾದ ವಿತರಣೆಯು ಸಾಂಗವಾಗಿ ನಡೆಯುತ್ತಿದೆ ಎಂದು ಟ್ರಸ್ಟಿ ರಾಮ್ ಮೋಹನ ರಾಜ್ ತಿಳಿಸಿದರು.
