ಉದಯವಾಹಿನಿ, ಶಿವಮೊಗ್ಗ: ಗಣೇಶ ವಿಸರ್ಜನೆ ವೇಳೆ ಡೋಲು ಬಡಿಯುವ ವಿಚಾರವಾಗಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕಲ್ಲುತೂರಾಟ ನಡೆದಿರುವ ಘಟನೆ ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ಸಂಜೆ ನಡೆದಿದೆ. ಘಟನೆಯಲ್ಲಿ ಇಬ್ಬರು ಪೊಲೀಸ್ ಕಾನ್ಸ್ ಟೆಬಲ್‌ಗಳು ಸೇರಿದಂತೆ ಹಲವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಗಣೇಶ ಹಬ್ಬಕ್ಕಾಗಿ ಪ್ರತಿಷ್ಠಾಪಿಸಿದ್ದ ವಿನಾಯಕ ಮೂರ್ತಿಯನ್ನು ಮೆರವಣಿಗೆಯಲ್ಲಿ ಕೊಂಡೊಯ್ಯು ವಾಗ ಅರಬಿಳಚಿ ಕ್ಯಾಂಪ್ ಗ್ರಾಮದ ಬಳಿ ಡೋಲು ಬಾರಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದಿದೆ.
ಇದು ವಿಕೋಪಕ್ಕೆ ತಿರುಗಿ ಪರಸ್ಪರ ಕಲ್ಲು ತೂರಾಟ ನಡೆದಿದ್ದು, ದೊಣ್ಣೆಗಳಿಂದ ಬಡಿದಾಡಿಕೊಂಡಿದ್ದಾರೆ.
ಪೊಲೀಸರು ಅವರನ್ನು ತಡೆಯಲು ಪ್ರಯತ್ನಿಸಿದರೂ ಸಾಧ್ಯವಾಗದೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಹೆಚ್ಚಿನ ಪಡೆಗಳು ಸ್ಥಳಕ್ಕೆ ದಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತರಲಾಗಿದ್ದು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ಭದ್ರಾವತಿ ಡಿವೈಎಸ್‌ಪಿ ಸೇರಿದಂತೆ ಹಲವರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಗ್ರಾಮದಲ್ಲಿ ಎರಡು ಸಂಘಟನೆಗಳು ಗಣೇಶ ಪ್ರತಿಷ್ಠಾಪನೆ ಮಾಡಿದ್ದವು. ಆದರೆ, ಡೋಲು ಬಾರಿಸಲು ಒಂದೇ ತಂಡಕ್ಕೆ ಎರಡೂ ಸಂಘಟನೆಗಳು ಒಪ್ಪಂದ ಮಾಡಿಕೊಂಡಿದ್ದವು. ಮೊದಲು ನಮ ಮೆರವಣಿಗೆಗೆ ಬರಬೇಕು ಎಂದು ಎರಡೂ ಸಂಘಟನೆಗಳು ಪಟ್ಟು ಹಿಡಿದಾಗ ವಿವಾದ ಸೃಷ್ಟಿಯಾಯಿತು.
