ಉದಯವಾಹಿನಿ, ಬೆಂಗಳೂರು: ಒಕ್ಕಲಿಗ ಪ್ರಬಲ ನಾಯಕರಿಬ್ಬರ ನಡುವಿನ ಪ್ರತಿಷ್ಠೆಯ ಕಣವಾಗಿರುವ ರಾಮನಗರ ಜಿಲ್ಲೆ ಚನ್ನಪಟ್ಟಣ ಉಪ ಚುನಾವಣೆಯ ಟಿಕೆಟ್ ವಿಚಾರದಲ್ಲಿ ಎನ್‌ಡಿಎ ಮಿತ್ರಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ನಲ್ಲಿ ರಾಜಕೀಯ ಲೆಕ್ಕಾಚಾರ ಜೋರಾಗಿಯೇ ನಡೆಯುತ್ತಿದೆ.
ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆ ಇಡೀ ರಾಜ್ಯದಲ್ಲಿಯೇ ಮನೆಮಾತಾಗಿದ್ದು, ದಿನಕಳೆದಂತೆ ಕದನ ಕುತೂಹಲ ಹೆಚ್ಚಾಗುತ್ತಿದೆ. ಉಪ ಚುನಾವಣೆಯ ರಣಕಣವೂ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ನಿರ್ಧಾರದ ಮೇಲೆ ನಿಂತಿದೆ.
ಎನ್‌ಡಿಎ ಅಭ್ಯರ್ಥಿಯಾಗಿಯೇ ನಾನು ಕಣಕ್ಕಿಳಿಯುತ್ತೇನೆ ಎಂದಿರು ಬಿಜೆಪಿ ವಿಧಾನಪರಿಷತ್ ಸದಸ್ಯರೂ ಆಗಿರುವ ಸಿ.ಪಿ.ಯೋಗೇಶ್ವರ್ ಅವರು, ಒಂದು ವೇಳೆ ಪಕ್ಷದ ಟಿಕೆಟ್ ಕೈತಪ್ಪಿದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದರು. ನಂತರ ದಿನಗಳಲ್ಲಿ ಪಕ್ಷದ ತೀರ್ಮಾನಕ್ಕೆ ಬದ್ಧ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇದು ಸಹಜವಾಗಿ ಎನ್‌ಡಿಎ ಮೈತ್ರಿಕೂಟವನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ.
2023ರ ವಿಧಾನಸಭೆ ಚುನಾವಣೆಯಲ್ಲಿ ಚನ್ನಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ 96,592 ಮತಗಳನ್ನು ಪಡೆದು ಜಯಗಳಿಸಿದ್ದರು. ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ 80,677 ಮತಗಳನ್ನು ಪಡೆದು ಸೋಲು ಕಂಡಿದ್ದರು. ಕಾಂಗ್ರೆಸ್ ಅಭ್ಯರ್ಥಿ ಗಂಗಾಧರ್ ಎಸ್. ಕೇವಲ 15,374 ಮತ ಪಡೆದಿದ್ದರು.
ಚನ್ನಪಟ್ಟಣ ಉಪಚುನಾವಣೆಗೆ ಡಿಕೆ ಬ್ರದರ್ಸ್ ಅಚ್ಚರಿಯ ಅಭ್ಯರ್ಥಿ ಕಂಬಿ ಹಿಂದೆ ಇದ್ದಾರೆ, ಈ ಉಪ ಚುನಾವಣೆಯಲ್ಲಿ ಚನ್ನಪಟ್ಟಣ ಗೆಲ್ಲಬೇಕು ಎಂದು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ತಂತ್ರ ರೂಪಿಸುತ್ತಿದ್ದಾರೆ. ಕ್ಷೇತ್ರಕ್ಕೆ ಪದೇ-ಪದೇ ಭೇಟಿ ನೀಡುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರದಲ್ಲಿ ಸೋಲು ಕಂಡ ಡಿ. ಕೆ. ಸುರೇಶ್ ಚನ್ನಪಟ್ಟಣದಿಂದ ಕಣಕ್ಕಿಳಿಯಬಹುದು ಎಂಬ ಸುದ್ದಿಗಳು ಹಬ್ಬಿವೆ.
