ಉದಯವಾಹಿನಿ, ಬೆಂಗಳೂರು: ಕೆಲವೇ ದಿನಗಳ ಹಿಂದೆ ಮನೆಯೊಂದು ಮೂರು ಬಾಗಿಲು ಎಂಬಂತಿದ್ದ ಬಿಜೆಪಿಯಲ್ಲಿ ಸದ್ಯ ಕೈ ಕಟ್! ಬಾಯ್ ಮುಚ್..! ಎಂಬ ಪರಿಸ್ಥಿತಿ ಇದೆ.ಪಕ್ಷದ ತೀರ್ಮಾನಗಳು, ನಿರ್ಣಯ ಹಾಗೂ ಸ್ವಪಕ್ಷೀಯರ ವಿರುದ್ಧ ಯಾರೊಬ್ಬರೂ ಬಾಯ್ಬಿಟ್ಟು ಮಾಧ್ಯಮಗಳ ಮುಂದೆ ಮಾತನಾಡದಂತೆ ಕಟ್ಟುನಿಟ್ಟಿನ ಕಟ್ಟಪ್ಪಣೆ ವಿಧಿಸಿರುವ ಬಿಜೆಪಿ ವರಿಷ್ಠರು ಬಾಯಿ ಬಿಟ್ಟರೆ ಜೋಕೆ! ಎಂಬ ಎಚ್ಚರಿಕೆ ಸಂದೇಶ ವನ್ನು ರವಾನಿಸಿದ್ದಾರೆ.
ಸ್ವಪಕ್ಷೀಯರ ವಿರುದ್ದವೇ ಆಗಾಗ್ಗೆ ಗುಡುಗುತ್ತಿದ್ದ ಬಸನಗೌಡ ಪಾಟೀಲ್ ಯತ್ನಾಳ್, ಬಿ.ಪಿ.ಹರೀಶ್, ಪ್ರತಾಪ್ ಸಿಂಹ, ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಜಿ.ಎಂ.ಸಿದ್ದೇಶ್ವರ್ ಸೇರಿದಂತೆ ಬಿಜೆಪಿಯ ಖಾಯಂ ಭಿನ್ನಮತೀಯ ನಾಯಕರ ಬಾಯಿಗೆ ಬೀಗ ಬಿದ್ದಿದೆ. ಕಳೆದ ಕೆಲವು ದಿನಗಳಿಂದ ಭಿನ್ನಮತೀಯ ನಾಯಕರು ಅಪ್ಪಿತಪ್ಪಿಯೂ ಬಾಯಿ ಬಿಡುತ್ತಿಲ್ಲ. ತುಟಿಗೆ ಬೀಗ ಬಿದ್ದವರಂತೆ ಎಲ್ಲದಕ್ಕೂ ಮೌನದಿಂದಲೇ ಉತ್ತರಿಸುತ್ತಾ ಪಕ್ಷದ ವಿರುದ್ಧವಾಗಲಿ ಇಲ್ಲವೇ ಅಧ್ಯಕ್ಷರ ವಿರುದ್ಧ ನಾವು ಹೇಳಿಕೆ ನೀಡುವುದಿಲ್ಲ ಎಂದು ಮೌನಕ್ಕೆ ಶರಣಾಗುತ್ತಿದ್ದಾರೆ.
ಹೀಗಾಗಿ ಬಿಜೆಪಿಯಲ್ಲಿ ಸದ್ಯ ಭಿನ್ನಮತೀಯ ಚಟುವಟಿಕೆಗಳಿಗೆ ಸಂಪೂರ್ಣವಾದ ಕಡಿವಾಣ ಬಿದ್ದಿದೆ. ಮುಡಾ ಪ್ರಕರಣವನ್ನು ಮುಂದಿಟ್ಟುಕೊಂಡು ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಬೆಂಗಳೂರಿನಿಂದ ಮೈಸೂರುವರೆಗೆ ಪಾದಯಾತ್ರೆ ನಡೆಸಿದಾಗ ಯತ್ನಾಳ್ ಸೇರಿದಂತೆ ಹಲವರು ಆಟ ಕೆಡಿಸುವ ಕೆಲಸಕ್ಕೆ ಕೈ ಹಾಕಿದ್ದರು. ಅದರಲ್ಲೂ ಬಿಜೆಪಿಯ ಫೈರ್ ಬ್ರ್ಯಾಂಡ್ ನಾಯಕ ಎಂದೇ ಗುರುತಿಸಿಕೊಂಡಿರುವ ಯತ್ನಾಳ್ ಪಾದಯಾತ್ರೆ ಉದ್ದೇಶವನ್ನೇ ಪ್ರಶ್ನೆ ಮಾಡಿದ್ದರು. ವಿಶೇಷವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಗುರಿಯಾಗಿಟ್ಟುಕೊಂಡು ವಾಚಮಾಚಗೋಚರವಾಗಿ ಟೀಕೆ ಮಾಡಿದ್ದರು.ಜೊತೆಗೆ ಬಸವ ಕಲ್ಯಾಣದಿಂದ ಬೀದರ್ವರೆಗೆ ಪ್ರತ್ಯೇಕ ಪಾದಯಾತ್ರೆ ನಡೆಸುವುದಾಗಿ ಹೇಳಿದ್ದರು. ಇದು ಬಿಜೆಪಿಗೆ ಸಾಕಷ್ಟು ಮುಜುಗರ ಸೃಷ್ಟಿಸಿತ್ತು.
