ಉದಯವಾಹಿನಿ, ಹುಬ್ಬಳ್ಳಿ : ನಗರದ ಚನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನಲ್ಲಿ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿಯ ವಿಸರ್ಜನೆ ಪೂರ್ವದಲ್ಲಿ ಇಂದು ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ಮೆರವಣಿಗೆ ಜರುಗಿತು.
ವಿವಿಧ ಕಲಾತಂಡಗಳ ಪ್ರದರ್ಶನ ನಡೆಯಿತು. ಪಂಚವಾದ್ಯ ಡೋಲು, ಝಾಂಜ್, ಡಿಜೆ ಮೇಳಗಳು ಮೆರವಣಿಗೆಗೆ ಮೆರಗು ತಂದವು. ರಸ್ತೆಯುದ್ದಕ್ಕೂ ಭಗವಾಧ್ವಜ, ಕೇಸರಿ ಬಾವುಟಗಳು ರಾರಾಜಿಸಿದವು.
ಮೆರವಣಿಗೆಯು ಮೈದಾನದಿಂದ ಆರಂಭವಾಗಿ ಹಳೇ ಬಸ್ ನಿಲ್ದಾಣದಿಂದ ನಗರದ ಇಂದಿರಾಗಾಜಿನ ಮನೆಯವರೆಗೆ ಸಾಗಿ ನಂತರ ಸಂಜೆ ವಿಸರ್ಜನೆ ಜರುಗಲಿದೆ.ಮೆರವಣಿಗೆ ಸಂದರ್ಭದಲ್ಲಿ ಮಾಜಿ ಸಚಿವ ಸಿಟಿ ರವಿ, ಶಂಕರ್ ಪಾಟೀಲ್ ಮುನೇನಕೊಪ್ಪ, ಶಾಸಕರಾದ ಮಹೇಶ್ ಟೆಂಗಿನಕಾಯಿ, ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್, ಪಾಲಿಕೆ ಮೇಯರ್ ರಾಮಣ್ಣ ಬಡಿಗೇರ, ಮಾಜಿ ಶಾಸಕ ಅಶೋಕ ಕಾಟವೆ, ಪಾಲಿಕೆ ಸದಸ್ಯರಾದ ರಾಜಣ್ಣಾ ಕೊರವಿ, ಸಂತೋಷ್ ಚವ್ಹಾನ್, ಸಂಜಯ್ ಬಡಸ್ಕರ್, ಡಾ. ವಿ.ಎಸ್.ವಿ ಪ್ರಸಾದ್ ಮೊದಲಾದವರು ಇದ್ದರು.
ಪೊಲೀಸ್ ಬಂದೋಬಸ್ತ್ : ಮೂರು ದಿನಗಳವರೆಗೆ ಪ್ರತಿಷ್ಠಾಪನೆ ಮಾಡಲಾಗಿದ್ದ, ಗಣೇಶ ಮೂರ್ತಿ ಸಂಭ್ರಮದ ವಿದಾಯ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು.
