ಉದಯವಾಹಿನಿ, ಬೆಂಗಳೂರು : ಮುಡಾ ಪ್ರಕರಣದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವ ಬದಲಾವಣೆಯಾಗಲಿದೆ ಎಂಬ ವದಂತಿ ಹಬ್ಬಿರುವ ಬೆನ್ನಲ್ಲೇ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರು ನವದೆಹಲಿಗೆ ತೆರಳಿರುವುದು ತೀವ್ರ ಕುತೂಹಲ ಕೆರಳಿಸಿದೆ.ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತು ಬಿ.ವೈ.ವಿಜಯೇಂದ್ರ ದೆಹಲಿಗೆ ವರಿಷ್ಠರ ಸೂಚನೆಯಂತೆ ಮಾತುಕತೆ ನಡೆಸಲು ಪ್ರಯಾಣ ಬೆಳೆಸಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.
ಮೇಲ್ನೋಟಕ್ಕೆ ದೆಹಲಿ ಪ್ರಯಾಣದಲ್ಲಿ ಯಾವುದೇ ವಿಶೇಷತೆ ಇಲ್ಲ ಎಂದು ಪಕ್ಷದ ಮೂಲಗಳು ಹೇಳಿವೆಯಾದರೂ ಪ್ರಸಕ್ತ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಬೆಳವಣಿಗೆಗೂ ವಿಜಯೇಂದ್ರ ದಿಢೀರ್ ದೆಹಲಿಗೆ ಪ್ರಯಾಣ ಬೆಳೆಸಿರುವುದಕ್ಕೂ ಸಂಬಂಧವಿದೆ ಎಂದು ಹೇಳಲಾಗುತ್ತಿದೆ.ಒಂದು ಕಡೆ ಸಚಿವ ಎಂ.ಬಿ.ಪಾಟೀಲ್ ದೆಹಲಿಯಲ್ಲಿ ಬೀಡು ಬಿಟ್ಟಿರುವುದು, ಕಳೆದ ವಾರ ಸಚಿವರಾದ ಪರಮೇಶ್ವರ್, ಸತೀಶ್ ಜಾರಕಿಹೊಳಿ, ದೆಹಲಿಯಲ್ಲೇ ಎರಡು ದಿನ ವಾಸ್ತವ್ಯ ಹೂಡಿ ಎಐಸಿಸಿ ನಾಯಕರ ಜೊತೆ ಮಾತುಕತೆ ನಡೆಸಿದ್ದರು.
ಈ ಎಲ್ಲಾ ಬೆಳವಣಿಗೆಗಳ ನಡುವೆ ರಾಜ್ಯದಲ್ಲಿ ಸದಸ್ಯತ್ವ ನೋಂದಣಿ ನಡೆಸುತ್ತಿದ್ದ ವಿಜಯೇಂದ್ರ ದಿಢೀರನೇ ಛಲವಾದಿ ನಾರಾಯಣಸ್ವಾಮಿ ಜೊತೆ ದೆಹಲಿಗೆ ತೆರಳಿರುವುದು ಬಿಜೆಪಿಯಲ್ಲಿ ಹಠಾತ್ ಬೆಳವಣಿಗೆ ಎಂದೇ ಹೇಳಲಾಗುತ್ತಿದೆ. ಕಿತ್ತೂರು ಕರ್ನಾಟಕ ಭಾಗದ ಪ್ರಭಾವಿ ಸಚಿವರೊಬ್ಬರು ಕೆಲದಿನಗಳ ಹಿಂದೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಜೊತೆ ಮಾತುಕತೆ ನಡೆಸಿದ್ದರು ಎನ್ನಲಾಗಿದೆ.ಬೆಳಗಾವಿಯ ಮಾಜಿ ಸಚಿವರೊಬ್ಬರು ಮಹಾರಾಷ್ಟ್ರದ ಬಿಜೆಪಿ ಹಿರಿಯ ನಾಯಕರ ಜೊತೆ ಸತತ ಸಂಪರ್ಕದಲ್ಲಿದ್ದು ಅವರ ಸೂಚನೆ ಮೇರೆಗೆ ಪ್ರಮೋದ್ ಸಾವಂತ್ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದ ಎಂದು ತಿಳಿದುಬಂದಿದೆ.
