ಉದಯವಾಹಿನಿ, ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರೀ ವಿವಾದ ಸೃಷ್ಟಿಸಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಕ್ರಮ ನಿವೇಶನ ಹಂಚಿಕೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಮುಡಾ ಅಧಿಕಾರಿಗಳಿಗೆ ಲೋಕಾಯುಕ್ತ ನೋಟಿಸ್ ಜಾರಿ ಮಾಡಿದೆ.ಮುಡಾದಲ್ಲಿ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಮುಖ್ಯ ಅಧೀಕ್ಷಕ(ಚೀಫ್ ಸೂಪರಿಡೆೆಂಟ್), ಮುಖ್ಯ ಅಭಿಯಂತರ(ಚೀಫ್ ಇಂಜಿನಿಯರ್), ಕಾರ್ಯದರ್ಶಿ ಸೇರಿದಂತೆ 2017ರಲ್ಲಿ ಕರ್ತವ್ಯ ನಿರ್ವಹಿಸಿದ್ದ ಒಟ್ಟು 18 ಅಧಿಕಾರಿಗಳನ್ನು ವಿಚಾರಣೆಗೆ ಹಾಜರಾಗಬೇಕೆಂದು ಲೋಕಾಯುಕ್ತ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.
ಈ ಎಲ್ಲಾ ಅಧಿಕಾರಿಗಳು ವಿಚಾರಣೆಗೆ ಹಾಜರಾಗಬೇಕು. ಮುಡಾದಲ್ಲಿ 350ಕ್ಕೂ ಹೆಚ್ಚು ಪ್ರಭಾವಿ ಅಧಿಕಾರಿಗಳಿಗೆ ನಿವೇಶನ ಹಂಚಿಕೆ ಆರೋಪ ಪ್ರಕರಣ ಕುರಿತಂತೆ ಕೇಳಿಬಂದಿರುವ ಆರೋಪಗಳಿಗೆ ದಾಖಲೆಗಳನ್ನು ಹಾಜರುಪಡಿಸುವಂತೆಯೂ ಸೂಚನೆ ನೀಡಲಾಗಿದೆ.
ಮೈಸೂರು ತಾಲೂಕಿನ ಹಿನಕಲ್ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಸೈಟ್ ಹಂಚಿಕೆ ಮಾಡಲಾಗಿತ್ತು. ಹಿನಕಲ್ ಸರ್ವೇ ನಂಬರ್ 89ರಲ್ಲಿ ಅಧಿಕಾರಿಗಳಿಗೆ ನಿವೇಶನ ಹಂಚಿಕೆ ಮಾಡಲಾಗಿತ್ತು. ಮುಡಾದ 7.18 ಗುಂಟೆ ಜಮೀನಿನಲ್ಲಿ ನಿವೇಶನ ಮಾಡಿ 350ಕ್ಕೂ ಹೆಚ್ಚು ಪ್ರಭಾವಿ ಅಧಿಕಾರಿಗಳಿಗೆ ಹಂಚಿರುವ ಆರೋಪವಿದೆ.
ಆರೋಪಕ್ಕೆ ಸಂಬಂಧಿಸಿ ಆರ್‌ಟಿಐ ಕಾರ್ಯಕರ್ತ ಗಂಗರಾಜು 2017ರಲ್ಲಿ ದೂರು ನೀಡಿದ್ದರು. ಈ ಸಂಬಂಧ 2022ರಲ್ಲಿ ಮೈಸೂರು ಲೋಕಾಯುಕ್ತ ಪ್ರಕರಣ ದಾಖಲಿಸಿಕೊಂಡಿತ್ತು. ಸರ್ಕಾರದ ಅನುಮತಿ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಮೈಸೂರು ತಾಲ್ಲೂಕು ಹಿನಕಲ್ ಗ್ರಾಮ ಸರ್ವೆ ನಂ.89ರಲ್ಲಿ 7 ಎಕರೆ 18 ಗುಂಟೆ ಜಮೀನನ್ನು ಹಿನಕಲ್ ಮಂಡಲ ಪಂಚಾಯ್ತಿಯವರು ಆಶ್ರಯ ಯೋಜನೆಯಡಿ ಅನಧಿಕೃತ ಬಡಾವಣೆ ನಿರ್ಮಿಸಿ/ಉಳ್ಳವರಿಗೆ ರಾಜಕೀಯ ವ್ಯಕ್ತಿಗಳಿಗೆ ಹಂಚಿಕೆ ಮಾಡಿ ವಂಚಿಸಿದ ಬಗ್ಗೆ 2017ರ ಏಪ್ರಿಲ 1ರಂದು ನಾನು ತಮ ಕಛೇರಿಗೆ ದೂರು ನೀಡಿದ್ದೆ. ಇದು ದೃಢಪಟ್ಟಿರುವುದರಿಂದ ಸಂಬಂಧಪಟ್ಟವರ ವಿರುದ್ಧ ಕ್ರಮಕ್ಕಾಗಿ ಮನವಿ ಸಲ್ಲಿಸುತ್ತಿದ್ದೇನೆ ಎಂದು 2017ರಲ್ಲಿ ಗಂಗರಾಜು ಭ್ರಷ್ಟಾಚಾರ ನಿಗ್ರಹ ದಳದ ಮೈಸೂರು ಜಿಲ್ಲಾ ವ್ಯಾಪ್ತಿಯ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ಪತ್ರ ಬರೆದಿದ್ದರು.
