ಉದಯವಾಹಿನಿ, ಬೀದರ: ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಸೆ.20ರಂದು ಕಮಲನಗರ ತಾಲ್ಲೂಕಿನ ಸಾವಳಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ದಿಢೀರ್ ಭೇಟಿ ನೀಡಿ ವ್ಯವಸ್ಥೆಯನ್ನು ಪರಿಶೀಲಿಸಿದರು.
ಈ ವೇಳೆ ಶಾಲೆಯಲ್ಲಿರುವ ಎಲ್ಲ ತರಗತಿ ಕೋಣೆಗಳಲ್ಲಿ ಸಂಚರಿಸಿ ಮಕ್ಕಳ ಸಂಖ್ಯೆ ಹಾಗೂ ಪಠ್ಯ ಚಟುವಟಿಕೆಗಳ ಬಗ್ಗೆ ವಿವರಣೆ ಪಡೆದರು. ತರಗತಿ ಕೋಣೆಗಳಲ್ಲಿ ಅತ್ಯಲ್ಪ ಸಂಖ್ಯೆಯ ಮಕ್ಕಳಿರುವುದನ್ನು ಕಂಡು ಶಾಲೆಯ ಮುಖ್ಯಗುರುಗಳ ವಿರುದ್ಧ ಆಕ್ರೋಶ ಹೊರ ಹಾಕಿದರು.
ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಕಲ್ಪಿಸಬೇಕೆಂಬ ಉದ್ದೇಶದಿಂದ ಒಳ್ಳೆಯ ಕಟ್ಟಡವನ್ನು ನಿರ್ಮಿಸಿ ಅವಶ್ಯಕ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಆದರೂ ಮಕ್ಕಳು ಕಡಿಮೆ ಸಂಖ್ಯೆಯಲ್ಲಿರುವುದನ್ನು ನೋಡಿ ತೀವ್ರ ಬೇಸರವಾಗುತ್ತಿದೆ. ಮುಖ್ಯಗುರುಗಳು ಈ ಬಗ್ಗೆ ಗಮನ ಹರಿಸಬೇಕು. ಇಲ್ಲವಾದಲ್ಲಿ ಶಾಲೆ ಮುಚ್ಚುವ ಆತಂಕ ಎದುರಾಗುತ್ತದೆ ಎಂದು ಎಚ್ಚರಿಸಿದರು. ಶಿಕ್ಷಕರು ಮನೆ-ಮನೆಗೆ ತೆರಳಿ ಮಕ್ಕಳನ್ನು ಶಾಲೆಗೆ ಸೇರಿಸಲು ಪ್ರಯತ್ನಿಸಬೇಕು. ಮುಂದಿನ ದಿನಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಬೇಕೆಂದು ಸೂಚಿಸಿದರು. ಶಾಲೆ ಆವರಣದಲ್ಲಿ ಕಸ ಕಡ್ಡಿಗಳು ಬಿದ್ದಿರುವುದನ್ನು ಕಂಡು ಶಾಲೆಯ ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡರು.
ಶಾಲೆಯ ಮುಖ್ಯಗುರುಗಳು ಗ್ರಾಮಸ್ಥರೊಂದಿಗೆ ಸರಿಯಾಗಿ ವ್ಯವಹರಿಸುವುದಿಲ್ಲ. ಸರಿಯಾದ ಮಾಹಿತಿ ನೀಡುವುದಿಲ್ಲ. ಏನು ಕೇಳಿದರೂ ಹಾರಿಕೆ ಉತ್ತರ ಕೊಡುತ್ತಾರೆಂದು ಗ್ರಾಮಸ್ಥರು ಮುಖ್ಯಗುರುಗಳ ಬಗ್ಗೆ ಶಾಸಕರಿಗೆ ತಿಳಿಸಿದರು. ತಮ್ಮ ವರ್ತನೆಯನ್ನು ಸರಿಪಡಿಸಿಕೊಂಡು ಜನರೊಂದಿಗೆ ಸರಿಯಾಗಿ ಮಾತನಾಡಿಸಿ, ಕಲಿಕೆಯ ಕಡೆಗೆ ಹೆಚ್ಚಿನ ಗಮನ ಹರಿಸುವಂತೆ ಶಾಸಕರು ಮುಖ್ಯಗುರುಗಳಿಗೆ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!