ಉದಯವಾಹಿನಿ, ಬೆಂಗಳೂರು: ಆಂಧ್ರಪ್ರದೇಶದ ಹಿಂದಿನ ಸರ್ಕಾರದ ಅವಧಿಯಲ್ಲಿ ತಿರುಪತಿಯ ಲಡ್ಡುವಿನಲ್ಲಿ ಪ್ರಾಣಿ ಕೊಬ್ಬು ಹಾಗೂ ಮೀನಿನ ಎಣ್ಣೆ ಬಳಕೆ ಮಾಡಿದ ಆರೋಪ ದೇಶಾದ್ಯಂತ ಸಂಚಲನ ಸೃಷ್ಟಿಸಿದ ಹಿನ್ನಲೆಯಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ರಾಜ್ಯದ ಎಲ್ಲಾ ದೇವಾಲಯಗಳ ಪ್ರಸಾದವನ್ನು ಪ್ರಯೋಗಾಲಯಕ್ಕೆ ಒಳ ಪಡಿಸಲು ರಾಜ್ಯಸ ರ್ಕಾರ ಸೂಚನೆ ನೀಡಿದೆ. ವಿಶೇಷವೆಂದರೆ ಶುಕ್ರವಾರವಷ್ಟೇ ಮುಜರಾಯಿ ಇಲಾಖೆಯು ದೇವಾಲಯಗಳಲ್ಲಿ ಪ್ರಸಾದ ತಯಾರಿಕೆಗೆ ನಂದಿನಿ ತುಪ್ಪವನ್ನು ಕಡ್ಡಾಯವಾಗಿ ಬಳಸಬೇಕೆಂದು ಕಟ್ಟುನಿಟ್ಟಿನ ಸೂಚನೆ ಹೊರಡಿಸಿದ ಬೆನ್ನಲ್ಲೇ ಇದೀಗ ಪ್ರಸಾದವನ್ನು ಪ್ರಯೋಗಾಲಯಕ್ಕೆ ಒಳಪಡಿಸಲು ಸೂಚಿಸಲಾಗಿದೆ.
ರಾಜ್ಯದ ಮುಜರಾಯಿ ವ್ಯಾಪ್ತಿಯ ದೇವಾಲಯಗಳಲ್ಲಿ ಭಕ್ತರ ಸುರಕ್ಷತೆ ಮತ್ತು ಆರೋಗ್ಯದ ದೃಷ್ಟಿಯಿಂದ ಪ್ರಸಾದವನ್ನು ಪ್ರಯೋಗಾಲಯಕ್ಕೆ ಒಳಪಡಿಸಲಾಗುತ್ತದೆ.ತಿರುಪತಿ ದೇವಸ್ಥಾನದಲ್ಲಿ ಲಡ್ಡು ವಿವಾದ ಮುನ್ನಲೆಗೆ ಬಂದಿರುವ ಹಿನ್ನಲೆಯಲ್ಲಿ ಭಕ್ತರಲ್ಲಿ ಸಾಕಷ್ಟು ಗೊಂದಲ ಉಂಟಾಗಿದೆ. ಹೀಗಾಗಿ ಈ ಗೊಂದಲವನ್ನು ನಿವಾರಿಸಲು ಪ್ರಸಾದವನ್ನು ಪ್ರಯೋಗಾಲಯಕ್ಕೆ ಒಳಪಡಿಸುವುದಾಗಿ ಮುಜರಾಯಿ ಸಚಿವರಾಗಿರುವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ತಿರುಪತಿ ಲಡ್ಡು ವಿವಾದದಿಂದಾಗಿ ಭಕ್ತರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂಬ ಅನುಮಾನ ಎಲ್ಲೆಡೆ ಕೇಳಿಬರುತ್ತಿದೆ. ದೇವಸ್ಥಾನದಲ್ಲಿ ಪ್ರಸಾದವನ್ನು ಸ್ವೀಕರಿಸಲು ಭಕ್ತರು ಹಿಂದೆಮುಂದೆ ನೋಡಬೇಕಾದ ಪರಿಸ್ಥಿತಿ ಇದೆ. ಇದು ನಿವಾರಣೆಯಾಗಬೇಕಾದರೆ ಸರ್ಕಾರ ಕೆಲವು ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಸಮರ್ಥಿಸಿಕೊಂಡಿದ್ದಾರೆ.ಪ್ರಸ್ತುತ ತಿರುಪತಿ ದೇವಸ್ಥಾನಕ್ಕೆ ಲಡ್ಡು ಪ್ರಸಾದ ತಯಾರಿಸಲು ನಂದಿನಿ ತುಪ್ಪವನ್ನು ಕರ್ನಾಟಕ ಪೂರೈಸುತ್ತಿದೆ. ಕಳೆದ ವರ್ಷ, ತಿರುಪತಿ ತಿರುಮಲ ದೇವಸ್ಥಾನವು ಕೆಎಂಎಫ್‌ನ ನಂದಿನಿ ತುಪ್ಪ ಮತ್ತು ಇತರ ಉತ್ಪನ್ನಗಳ ಖರೀದಿಯನ್ನು ಬೆಲೆಯ ಕಾರಣವೊಡ್ಡಿ ನಿಲ್ಲಿಸಿತ್ತು. ಕೆಎಂಎಫ್ ಉಲ್ಲೇಖಿಸಿದ ಬೆಲೆಗಳನ್ನು ಟಿಟಿಡಿ ಅನುಮೋದಿಸದೆ ಇತರ ಕಂಪನಿಗಳಿಂದ ತುಪ್ಪವನ್ನು ಖರೀದಿಸಲು ಪ್ರಾರಂಭಿಸಿತ್ತು ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯಕ್ ತಿಳಿಸಿದ್ದರು. ಇದೀಗ ಮತ್ತೆ ಟಿಟಿಡಿ ನಂದಿನಿ ತುಪ್ಪ ಮತ್ತಿತರ ಉತ್ಪನ್ನಗಳನ್ನು ಖರೀದಿಸುತ್ತಿದೆ.
