ಉದಯವಾಹಿನಿ, ಚಿತ್ರದುರ್ಗ: ನಗರ ವ್ಯಾಪ್ತಿಯಲ್ಲಿ ಹಾದುಹೋಗಿರುವ ಸೊಲ್ಲಾಪುರ-ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ-369 ಸ್ಥಿತಿ ಗ್ರಾಮೀಣ ಭಾಗದ ಕಚ್ಚಾ ರಸ್ತೆಗಿಂತಲೂ ಕಡೆಯಾಗಿದ್ದು, ಸ್ಥಳೀಯ ನಾಗರಿಕರು ಅಲ್ಲಿ ಓಡಾಡಲು ಪರದಾಡುತ್ತಿದ್ದಾರೆ.
ಮುರುಘಾ ಮಠದ ಮುಂಭಾಗದಿಂದ ಹೊಳಲ್ಕೆರೆ ರಸ್ತೆವರೆಗೆ ನಗರ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ 5 ಕಿ.ಮೀ.
ಸಾಗುತ್ತದೆ. ನಗರದಿಂದ ಶಿವಮೊಗ್ಗದವರೆಗೂ ರಸ್ತೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು ಕೆಲವೆಡೆ ಅಲ್ಪಸ್ವಲ್ಪ ಕಾಮಗಾರಿ ಬಾಕಿ ಉಳಿದಿದೆ. ನಗರ ವ್ಯಾಪ್ತಿಯಲ್ಲಿ ಕಳೆದ 6 ತಿಂಗಳಿಂದ ಕಾಮಗಾರಿ ಅರ್ಧಕ್ಕೆ ನಿಂತಿದ್ದು ರಸ್ತೆಯುದ್ದಕ್ಕೂ ಬರುವ ವಿವಿಧ ಬಡಾವಣೆಗಳ ಜನರು ಕಿರಿಕಿರಿ ಅನುಭವಿಸುತ್ತಿದ್ದಾರೆ.
ಈ ಭಾಗದಲ್ಲಿ ಗಣಿ ಲಾರಿಗಳ ಓಡಾಟ ತೀವ್ರವಾಗಿದ್ದು ರಸ್ತೆ ತೀರಾ ಹಾಳಾಗಿದೆ. ದೂಳಿನ ಸಮಸ್ಯೆಯಿಂದಾಗಿ ಇಲ್ಲಿ ಓಡಾಡುವ ಜನರು ರೋಗಭೀತಿ ಅನುಭವಿಸುತ್ತಿದ್ದಾರೆ. ನಗರದ ಹೊರವಲಯದ ವಿವಿಧ ಹೊಸ ಬಡಾವಣೆಗಳಲ್ಲಿ ಮನೆಕಟ್ಟಿಕೊಂಡಿರುವ ನಿವಾಸಿಗಳು ನಿತ್ಯವೂ ದೂಳಿನ ಮಜ್ಜನ ಅನುಭವಿಸುತ್ತಿದ್ದಾರೆ. ರಸ್ತೆಗೆ ಹಾಕಿರುವ ಜಲ್ಲಿ ನಡುವೆ ವಾಹನ ಓಡಿಸುವುದು ಸವಾಲಾಗಿದೆ.
ಹೆದ್ದಾರಿಯ ಎರಡೂ ಕಡೆ ಸರ್ವೀಸ್‌ ರಸ್ತೆಯಿಲ್ಲದ ಕಾರಣ, ಶಾಲಾ ವಾಹನಗಳು ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳಲು ತೀವ್ರ ತೊಂದರೆ ಎದುರಿಸುತ್ತಿವೆ. ತಿರುಮಲ ಕಲ್ಯಾಣ ಮಂಟಪದ ಬಳಿಯ ಪ್ರಮುಖ ಸರ್ಕಲ್‌ನಲ್ಲಿ ರಸ್ತೆ ಅಗಲವಾಗಿದ್ದು ವಾಹನಗಳು ಇಳಿಜಾರಿನಲ್ಲಿ ವೇಗವಾಗಿ ಬರುತ್ತವೆ. ಮುಂದೆ ರಸ್ತೆ ಕಿರಿದಾಗಿರುವ ಕಾರಣ ವಾಹನ ನಿಯಂತ್ರಣ ತಪ್ಪಿದ ಅನೇಕ ಘಟನೆಗಳು ನಡೆದಿವೆ. ನಿತ್ಯವೂ ಸಣ್ಣಪುಟ್ಟ ಅಪಘಾತಗಳು ಸಾಮಾನ್ಯವಾಗಿವೆ. ಈ ಭಾಗದಲ್ಲಿ ಸರ್ವೀಸ್‌ ರಸ್ತೆ ನಿರ್ಮಿಸಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಾರೆ. ಮುರುಘಾ ಮಠ ದಾಟುತ್ತಿದ್ದಂತೆ ರಾಷ್ಟ್ರೀಯ ಹೆದ್ದಾರಿಗೆ ಅಳತೆ ಮಾಡಿ ಬಿಟ್ಟಿರುವ ಸ್ಥಳದಲ್ಲೇ ತೂಕದ ಸೇತುವೆ (ವೈಯಿಂಗ್‌ ಬ್ರಿಜ್‌) ಇದ್ದು ಉದ್ದಕ್ಕೂ ಗಣಿ ಲಾರಿಗಳು ನಿಂತಿರುತ್ತವೆ. ವಾಹನಗಳು ಓಡಾಡುವ ರಸ್ತೆ ಜಾಗ ತೀರಾ ಚಿಕ್ಕದಾಗಿದ್ದು ವಾಹನ ಸವಾರರು ಮುಂದೆ ಸಾಗಲು ರಸ್ತೆಯನ್ನು ಹುಡುಕಬೇಕಾದ ಸ್ಥಿತಿ ಇದೆ.

Leave a Reply

Your email address will not be published. Required fields are marked *

error: Content is protected !!