ಉದಯವಾಹಿನಿ, ಬೆಂಗಳೂರು : ಉದ್ಯಮಿಗಳ 16 ಲಕ್ಷ ಕೋಟಿ ಸಾಲವನ್ನು ರೈಟ್ ಆಫ್ ಮಾಡಲಾಗಿದೆ. ಕೋಟ್ಯಂತರ ರೂ. ನಷ್ಟವನ್ನು ಕಡೆಗಣಿಸಿ ಸಣ್ಣಪ್ರಮಾಣದ ಮುಡಾ ಪ್ರಕರಣವನ್ನು ಪ್ರತಿನಿತ್ಯ ಚರ್ಚಿಸಲಾಗುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ಹೈಕಮಾಂಡ್ ಇದೆ ಎಂದು ಹೇಳುವ ಮೂಲಕ ಎಲ್ಲಾ ವದಂತಿಗಳಿಗೂ ತೆರೆ ಎಳೆದಿದ್ದಾರೆ. ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ಎಫ್‌ಐಆರ್ ದಾಖಲಾಗುವ ಹಂತದಲ್ಲಿ ಹೈಕಮಾಂಡ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆಯವರ ಈ ಹೇಳಿಕೆಗಳು ರಾಜಕೀಯವಾಗಿ ಭುಗಿಲೆದ್ದಿದ್ದ ಚರ್ಚೆಗಳಿಗೆ ತೆರೆ ಎಳೆದಿವೆ.
ಮುಡಾ ಪ್ರಕರಣದಲ್ಲಿ ದೋಷಾರೋಪಣ ಪಟ್ಟಿ ಸಲ್ಲಿಕೆಯಾಗಿಲ್ಲ. ದೋಷಿ ಎಂದೂ ಕೂಡ ತೀರ್ಮಾನವಾಗಿಲ್ಲ. ಆದರೂ ಪ್ರತಿದಿನ ಈ ಕುರಿತೇ ಹೆಚ್ಚು ಚರ್ಚೆಯಾಗುತ್ತಿದೆ. ಈ ಮೂಲಕ ಕಾಂಗ್ರೆಸ್ ಪಕ್ಷದ ವರ್ಚಸ್ಸನ್ನು ಹಾಳು ಮಾಡುವ ಹುನ್ನಾರ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಈ ಹಿಂದೆ ಗುಜರಾತ್‌ನಲ್ಲಿ ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದಾಗ ಗೋದ್ರಾ ಹತ್ಯಾಕಾಂಡ ನಡೆದಿತ್ತು. ಆ ವೇಳೆ ಅವರು ರಾಜೀನಾಮೆ ನೀಡಿದ್ದರೇ? ಅಮಿತ್ ಷಾ ವಿರುದ್ಧವೂ ಹಲವು ಪ್ರಕರಣಗಳು ಬಾಕಿ ಇದ್ದವು. ಅವರೂ ಕೂಡ ರಾಜೀನಾಮೆ ನೀಡಿರಲಿಲ್ಲ. ಬಿಜೆಪಿಯವರು ಯಾವುದೋ ಒಬ್ಬ ವ್ಯಕ್ತಿಯನ್ನು ಗುರಿಯಾಗಿಸಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ವ್ಯಕ್ತಿಯ ವರ್ಚಸ್ಸನ್ನು ಹಾಳು ಮಾಡುವ ಮೂಲಕ ಪಕ್ಷದ ವರ್ಚಸ್ಸಿಗೂ ಧಕ್ಕೆ ಉಂಟು ಮಾಡುವ ಹುನ್ನಾರಗಳನ್ನು ಬಿಜೆಪಿ ನಡೆಸಿದೆ. ಬಿಜೆಪಿಯ ಕೇಂದ್ರ ನಾಯಕರ ಗುರಿ ಕಾಂಗ್ರೆಸ್ ಪಕ್ಷವಾಗಿದೆ. ವ್ಯಕ್ತಿಗತ ಗುರಿಯಿಲ್ಲ. ಏನೇ ಆದರೂ ಪಕ್ಷ ಮುಂದುವರೆಯುತ್ತದೆ. ನಮ ಪಕ್ಷವನ್ನು ಮುಗಿಸಲು ಮೂಲ ಮತಬ್ಯಾಂಕನ್ನು ನಾಶಪಡಿಸಲು ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿ ಈ ಎಲ್ಲಾ ಪ್ರತಿಭಟನೆಗಳು, ಚರ್ಚೆಗಳು ನಡೆಯುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
