ಉದಯವಾಹಿನಿ, ತಾವರಗೇರಾ: ಸುಸಜ್ಜಿತ ಕಟ್ಟಡ, ವಿಶಾಲವಾದ ಸ್ಥಳಾವಕಾಶ, ಬೃಹತ್ ಗ್ರಂಥ ಭಂಡಾರ, ಗುಣಮಟ್ಟದ ಕುರ್ಚಿ, ಟೇಬಲ್‌ಗಳು ಸೇರಿದಂತೆ ಅಗತ್ಯ ಮೂಲ ಸೌಕರ್ಯ ಹೊಂದಿದ್ದರೂ ಪಟ್ಟಣದ ಅರಿವಿನ ಕೇಂದ್ರವಾದ ಗ್ರಂಥಾಲಯವು ಓದುಗರಿಂದ ದೂರವಾಗಿದೆ.
ತಾವರಗೇರಾ ಪಟ್ಟಣದ ಮುದಗಲ್ ರಸ್ತೆಯಲ್ಲಿರುವ ಗ್ರಂಥಾಲಯಕ್ಕೆ ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ಬೃಹತ್ ಸಂಖ್ಯೆಯ ಪುಸ್ತಕಗಳನ್ನು ಪೂರೈಕೆ ಮಾಡಲಾಗಿದೆ.
ಅವುಗಳು ದೂಳು ಹಿಡಿಯುತ್ತಿವೆ. ಈ ಸಾರ್ವಜನಿಕ ಗ್ರಂಥಾಲಯಕ್ಕೆ ನಿತ್ಯ ನೂರಾರು ಸಂಖ್ಯೆಯ ಓದುಗರು ಬರುತ್ತಾರೆ. ಆದರೆ ಈ ಗ್ರಂಥಾಲಯವು ನಿತ್ಯ ಬಾಗಿಲು ತೆರೆದಿರುವುದಿಲ್ಲ’ ಎಂದು ಓದುಗರು ಗಂಭೀರ ಆರೋಪ ಮಾಡಿದ್ದಾರೆ.
ದೂಳು ಹಿಡಿದ ಪುಸ್ತಕ, ಚೇರ್, ಟೇಬಲ್: ಗ್ರಂಥಾಲಯಕ್ಕೆ ಇಲಾಖೆ ನೀಡಿರುವ ಟೇಬಲ್, ಚೇರ್, ಪುಸ್ತಕಗಳು ಧೂಳು ಹತ್ತಿದ್ದು, ಎಲ್ಲಾ ಸಾಮಗ್ರಿಗಳು ಮೂಲೆಯಲ್ಲಿ ಇಡಲಾಗಿದೆ. ಒಳ ಕೋಣೆಯಲ್ಲಿರುವ ದಾಸ್ತಾನು ಕೊಠಡಿಯಲ್ಲಿ ವಿವಿಧ ಇಲಾಖೆ, ಮಹನೀಯರ ಇತಿಹಾಸ, ಸರ್ಕಾರ ಹಾಗೂ ಗ್ರಂಥಾಲಯ ಇಲಾಖೆ ನೀಡಿರುವ ಸ್ಪರ್ಧಾತ್ಮಕ ಪರೀಕ್ಷೆ, ಸಾಮಾನ್ಯ ಜ್ಞಾನ ಇತರೆ ವಿಷಯಗಳ ಪುಸ್ತಕಗಳನ್ನು ತುಂಬಿರುವ 20ಕ್ಕೂ ಹೆಚ್ಚು ಚೀಲಗಳು ಧೂಳು ತಿನ್ನುತ್ತಿವೆ. ದಾಸ್ತಾನು ಪುಸ್ತಕ ದಾಖಲಾತಿಯ ನಿರ್ವಹಣೆಯೇ ಇಲ್ಲವಾಗಿದೆ.
