ಉದಯವಾಹಿನಿ , ಮಹಿಳಾ ಪ್ರೀಮಿಯರ್ ಲೀಗ್‌ನ 12ನೇ ರೋಚಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನೀಡಿದ ಸವಾಲಿನ ಗುರಿಯನ್ನು ಬೆನ್ನಟ್ಟುವಲ್ಲಿ ಗುಜರಾತ್ ಜೈಂಟ್ಸ್ ಆರಂಭದಲ್ಲೇ ಎಡವಿದೆ. ಭಾರತೀಯ ಯುವ ಬೌಲರ್ ಸಯಾಲಿ ಸತ್ಪರೆ ಅವರ ಮಾರಕ ಬೌಲಿಂಗ್ ದಾಳಿಗೆ ಸಿಲುಕಿ ಗುಜರಾತ್ ತಂಡವು ತನ್ನ ಇಬ್ಬರು ಪ್ರಮುಖ ಬ್ಯಾಟರ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ, ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 176 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿತು. ಆ ಮೂಲಕ ಎದುರಾಳಿ ಗುಜರಾತ್ ತಂಡಕ್ಕೆ ಗೆಲ್ಲಲು 177 ರನ್‌ಗಳ ಕಠಿಣ ಗುರಿಯನ್ನು ನೀಡಿತು.
ಬೃಹತ್ ಮೊತ್ತವನ್ನು ಬೆನ್ನಟ್ಟಿದ ಗುಜರಾತ್ ತಂಡಕ್ಕೆ ಲಾರೆನ್ ಬೆಲ್ ಮೊದಲ ಓವರ್‌ನಲ್ಲಿ ಕೇವಲ 3 ರನ್ ನೀಡಿ ಲಗಾಮು ಹಾಕಿದರು. ರನ್ ಗಳಿಕೆಯ ಒತ್ತಡದಲ್ಲಿದ್ದ ಗುಜರಾತ್ ಓಪನರ್ ಬೆತ್ ಮೂನಿ, ಎರಡನೇ ಓವರ್‌ನ ಮೊದಲ ಎಸೆತದಲ್ಲೇ ಸಯಾಲಿ ಸತ್ಪರೆ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗಿ ಹೊರನಡೆದರು.
ಅಚ್ಚರಿಯೆಂದರೆ, ನಂತರ ಕ್ರೀಸ್‌ಗೆ ಬಂದ ಮತ್ತೊಬ್ಬ ಅಪಾಯಕಾರಿ ಆಟಗಾರ್ತಿ ಸೋಫಿ ಡಿವೈನ್ ಕೂಡ ಸಯಾಲಿ ಅವರ ಸ್ಪಿನ್ ತಂತ್ರಕ್ಕೆ ಬಲಿಯಾದರು. ದೊಡ್ಡ ಹೊಡೆತಕ್ಕೆ ಕೈಹಾಕಿದ ಡಿವೈನ್ ಕ್ಯಾಚ್ ನೀಡಿ ಶೂನ್ಯಕ್ಕೆ (0) ಔಟಾದರು. ಕೇವಲ ಎರಡು ಓವರ್‌ಗಳ ಅಂತರದಲ್ಲಿ ಪ್ರಮುಖ ವಿಕೆಟ್ ಕಳೆದುಕೊಂಡಿರುವ ಗುಜರಾತ್ ತಂಡ ಸದ್ಯ ತೀವ್ರ ಒತ್ತಡಕ್ಕೆ ಸಿಲುಕಿದೆ.

Leave a Reply

Your email address will not be published. Required fields are marked *

error: Content is protected !!