ಉದಯವಾಹಿನಿ, ಬೆಂಗಳೂರು: ಸರ್ಕಾರಿ ನೌಕರರಿಗೆ, ತೆರಿಗೆ ಪಾವತಿದಾರರಿಗೆ ಉಚಿತ ಅಕ್ಕಿ ಕೊಡಬೇಕಾ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಪ್ರಶ್ನಿಸಿರುವುದು ಮುಂದಿನ ದಿನಗಳಲ್ಲಿ ಶಕ್ತಿ ಮತ್ತು ಗೃಹಜ್ಯೋತಿ ಯೋಜನೆಗಳಲ್ಲೂ ಕೆಲ ಫಲಾನುಭವಿಗಳಿಗೆ ಕೋಕ್ ನೀಡುವ ಮುನ್ಸೂಚನೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ವ್ಯಾಖ್ಯಾನಿಸಿದ್ದಾರೆ.ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಅವರು ತೆರಿಗೆ ಪಾವತಿದಾರರು ಮತ್ತು ಸರ್ಕಾರಿ ನೌಕರರ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡಲಾಗಿದೆ. ಇವರಿಗೆ ಅಕ್ಕಿ ಕೊಡಬೇಕಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಹಾಗಾದರೆ ಉಚಿತ ಬಸ್ ಪ್ರಯಾಣದ ಶಕ್ತಿ ಗ್ಯಾರಂಟಿಯಲ್ಲಿ ಹಾಗೂ ಗೃಹಜ್ಯೋತಿ ಯೋಜನೆಯಡಿ ತೆರಿಗೆದಾರರು, ಸರ್ಕಾರಿ ನೌಕರರ ಲಾಭ ಪಡೆಯುತ್ತಿದ್ದಾರೆ. ಇವರಿಗೂ ಈ ಯೋಜನೆಯಿಂದ ಕೋಕ್ ನೀಡುವ ಮುನ್ಸೂಚನೆಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.
ಈ ಎಡಬಿಡಂಗಿ ಕಾಂಗ್ರೆಸ್ ಸರ್ಕಾರಕ್ಕೆ ಒಂದು ದೂರದೃಷ್ಟಿ, ಪೂರ್ವಸಿದ್ಧತೆ, ಗೊತ್ತುಗುರಿ ಇದ್ಯಾವುದೂ ಇಲ್ಲ. ಕೇವಲ ಚುನಾವಣೆ ಗೆಲ್ಲಲು ಮನಸ್ಸಿಗೆ ಬಂದ ಹಾಗೆ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದರು. ಈಗ ಗ್ಯಾರಂಟಿಗಳು ನುಂಗಲಾರದ, ಉಗಿಯಲಾರದ ಬಿಸಿ ತುಪ್ಪವಾಗಿರುವುದು ಸತ್ಯ ಎಂದು ಅಶೋಕ್ ಹೇಳಿದ್ದಾರೆ.
