ಉದಯವಾಹಿನಿ, ಹಾಸನ: ‘ಪ್ರದೇಶ ಕಾಂಗ್ರೆಸ್ ಸಮಿತಿ, ಸ್ವಾಭಿಮಾನಿಗಳ ಒಕ್ಕೂಟದ ಆಶ್ರಯದಲ್ಲಿ ಡಿ.5 ರಂದು ಹಾಸನದಲ್ಲಿ ಜನಕಲ್ಯಾಣ ಸಮಾವೇಶ ನಡೆಸಲಾಗುತ್ತಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ನಗರದಲ್ಲಿ ಸಿದ್ಧತೆಗಳನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ಜನಕಲ್ಯಾಣದ ಕಾರ್ಯಗಳನ್ನು ಏನು ಮಾಡಿದ್ದೇವೆ. ಜನರನ್ನು ಎಷ್ಟರ ಮಟ್ಟಿಗೆ ತಲುಪಿದ್ದೇವೆ ಎಂಬ ಸಂದೇಶ ನೀಡಲು ಸಮಾವೇಶ ಮಾಡಲಾಗುತ್ತಿದೆ. ಹಿತೈಷಿಗಳು, ಸ್ವಾಭಿಮಾನಿಗಳ ಒಕ್ಕೂಟಗಳು ಮುಖ್ಯಮಂತ್ರಿ ಕೆಲಸವನ್ನು ಮೆಚ್ಚಿ ಬೆಂಬಲ ನೀಡಿದ್ದಾರೆ’ ಎಂದರು.

‘ಲೋಕಸಭಾ ಚುನಾವಣೆ ವೇಳೆ ಹಾಸನದ ಬಹಳಷ್ಟು ಕುಟುಂಬಗಳು ನೋವು ಅನುಭವಿಸಿವೆ. ಇಡೀ ದೇಶದಾದ್ಯಂತ ಚರ್ಚೆ ನಡೆದಿದೆ. ಅವರಿಗೆ ಧೈರ್ಯ ಹೇಳಲು ಸಮಾವೇಶ ಹಮ್ಮಿಕೊಂಡಿದ್ದೇವೆ. ರಾಜ್ಯದ ಜನ ಉಪ ಚುನಾವಣೆಯ ಮೂಲಕ ಉತ್ತರ ಕೊಟ್ಟಿರುವುದರಿಂದ, ಪ್ರತಿಪಕ್ಷಗಳ ಟೀಕೆಗಳಿಗೆ ಉತ್ತರಿಸಬೇಕಿಲ್ಲ. ನಮ್ಮ ಕೆಲಸಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನನ್ನ ನೇತೃತ್ವದಲ್ಲಿ ಪಕ್ಷದ ಎಲ್ಲರೂ ಒಟ್ಟಾಗಿ ಆಯೋಜಿಸುತ್ತಿದ್ದೇವೆ’ ಎಂದರು.

ಬಿಜೆಪಿಯವರು ಭಾವನೆಗಳ ಮೇಲೆ ರಾಜಕಾರಣ ಮಾಡುತ್ತಾರೆ. ನಾವು ಜನರ ಬದುಕಿನ ಮೇಲೆ ರಾಜಕಾರಣ ಮಾಡುತ್ತೇವೆ. ಪ್ರತಿಯೊಬ್ಬರ ಬದುಕಿಗೆ ಶಕ್ತಿ ಕೊಡುವ ಕೆಲಸ ಮಾಡುತ್ತಿದ್ದೇವೆ’ ಎಂದರು. ‘6 ತಿಂಗಳಲ್ಲಿ ಸರ್ಕಾರ ಬಿದ್ದುಹೋಗುತ್ತದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳುತ್ತಿದ್ದಾರೆ. ಈಗಾಗಲೇ ಅವರಿಗೆ ರಾಜ್ಯದ ಜನ ಉತ್ತರ ಕೊಟ್ಟಿದ್ದಾರೆ. ಸಮಾವೇಶದ ಮೂಲಕ ನಾವೂ ಉತ್ತರ ಕೊಡುತ್ತೇವೆ’ ಎಂದರು.

Leave a Reply

Your email address will not be published. Required fields are marked *

error: Content is protected !!