ಉದಯವಾಹಿನಿ, ಬೆಂಗಳೂರು: ಬೆಳಗಾವಿ ಚಳಿಗಾಲ ಅಧಿವೇಶನ 2024 ಸುಗಮವಾಗಿ ನಡೆಸಲು ವಸತಿ, ಸಾರಿಗೆ, ಉಟೋಪಾಚಾರ ಸೇರಿದಂತೆ ಎಲ್ಲಾ ಅಗತ್ಯ ಸಿದ್ಧತೆಗಳನ್ನು ಜಿಲ್ಲಾಡಳಿತದಿಂದ ಮಾಡಿಕೊಳ್ಳಲಾಗಿದೆ.
ಸುಗಮ ಅಧಿವೇಶನಕ್ಕಾಗಿ ಈಗಾಗಲೇ 10 ಸಮಿತಿಗಳನ್ನು ರಚಿಸಲಾಗಿದೆ. ಶಾಸಕರು, ಸಚಿವರು, ಅಧಿಕಾರಿಗಳು ಸಿಬ್ಬಂದಿ ವಸತಿಗಾಗಿ ಖಾಸಗಿ ಹೋಟೆಲ್, ಅತಿಥಿ ಗೃಹ, ಪ್ರವಾಸಿ ಮಂದಿರಗಳಲ್ಲಿ ಒಟ್ಟಾರೆ 2,756 ಕೊಠಡಿಗಳನ್ನು ಕಾಯ್ದಿರಿಸಲಾಗಿದೆ.
ಕಲಾಪ ವೀಕ್ಷಣೆಗೆ ಆಗಮಿಸುವ ಸಾರ್ವಜನಿಕರಿಗೆ 8 ಕಡೆಗಳಲ್ಲಿ ಪಾವತಿ ಆಧಾರದ ಕ್ಯಾಂಟೀನ್ ವ್ಯವಸ್ಥೆ ಮಾಡಲಾಗಿದೆ. ಮಹಿಳಾ ಸ್ವ-ಸಹಾಯ ಸಂಘಗಳು ಸೇರಿದಂತೆ ವಿವಿಧ ಬಗೆಯ ಸಂಸ್ಥೆಗಳಿಗೆ 38 ಸ್ಟಾಲ್ ಗಳಿಗೂ ಅವಕಾಶ ಮಾಡಿಕೊಡಲಾಗುತ್ತಿದೆ. ಸುವರ್ಣ ವಿಧಾನಸೌಧದಲ್ಲಿ ಬಿಎಸ್‌ಎನ್‌ಎಲ್ ಸೇರಿದಂತೆ ಎಲ್ಲಾ ಖಾಸಗಿ ಸಂಸ್ಥೆಗಳಿಂದ ಅತ್ಯುತ್ತಮ ಅಂತರ್ಜಾಲ ಸಂಪರ್ಕ ಕಲ್ಪಿಸಲಾಗಿದೆ.
ಸಾರಿಗೆ ಅಗತ್ಯಗಳಿಗಾಗಿ ವಿವಿಧ ಜಿಲ್ಲೆಗಳಿಂದ ವಿವಿಧ ವಾಹನಗಳ ವ್ಯವಸ್ಥೆ ಮಾಡಲಾಗಿದ್ದು, ಡಿಟಿಐ, ಸ್ಪೋಟ್‌್ರ್ಸ ಹಾಸ್ಟೆಲ್ ಮತ್ತು ಅಂಬೇಡ್ಕರ್ ಭವನದಲ್ಲಿ ಚಾಲಕರಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ. ಖಾಸಗಿ ವಾಹನಗಳನ್ನೂ ಬಳಸಿಕೊಳ್ಳಲಾಗುವುದು. ಅಧಿವೇಶನಕ್ಕೆ ಸಾರ್ವಜನಿಕ ಪ್ರವೇಶಕ್ಕಾಗಿ, ಸಂದರ್ಶಕರು ಮತ್ತು ಪ್ರತಿನಿಧಿಗಳಿಗೆ ಸಂಬಂಧಿಸಿದ ಸಿಬ್ಬಂದಿಗೆ ಪಾಸ್‌ಗಳನ್ನು ನೀಡಲು ಆನ್‌ಲೈನ್ ಪಾಸ್ ವ್ಯವಸ್ಥೆ ಮಾಡಲಾಗಿದೆ. ಜನಪ್ರತಿನಿಧಿಗಳ ಸಿಬ್ಬಂದಿಗೆ ಪಾಸ್ ನೀಡಲು ಪೋರ್ಟಲ್ ಸೃಷ್ಟಿಸಲಾಗಿದೆ.
