ಉದಯವಾಹಿನಿ, ವಿಜಯಪುರ : ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಚರ್ಚೆಗೆ ಮೊದಲ ದಿನದಿಂದಲೇ ಅವಕಾಶ ಕಲ್ಪಿಸುವಂತೆ ಒತ್ತಾಯಿಸಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು, ವಿಧಾನಸಭೆ ಸಭಾಪತಿಗಳಾದ ಯು.ಟಿ.ಖಾದರ್ ಅವರಿಗೆ ಪತ್ರ ಬರೆದಿದ್ದಾರೆ.
ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಭಾಗಗಳ ಅಭಿವೃದ್ಧಿ ಹಾಗೂ ಸ್ಥಾನಮಾನಗಳ ಹಂಚಿಕೆಯಲ್ಲಿ ಪ್ರಾದೇಶಿಕ ತಾರತಮ್ಯವನ್ನು ನಿವಾರಿಸುವುದು ಅತ್ಯವಶ್ಯವಿದೆ. ಆದರೆ, ಪ್ರತಿ ಬಾರಿ ಅಧಿವೇಶನ ಜರುಗಿದಾಗ ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತು ಕೊನೆಯ ದಿನಗಳಲ್ಲಿ ಚರ್ಚೆಗೆ ಅವಕಾಶ ನೀಡುತ್ತಿದ್ದರಿಂದ, ಕೊನೆಯ ದಿನಗಳಲ್ಲಿ ಶಾಸಕರ ಹಾಜರಾತಿ ಕಡಿಮೆಯಾಗಿ ಚರ್ಚೆಯೇ ನಡೆಯುವುದಿಲ್ಲ ಎಂದು ಯತ್ನಾಳ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.
ಆದ್ದರಿಂದ, ಸಮಗ್ರ ಉತ್ತರ ಕರ್ನಾಟಕದ ನೀರಾವರಿ ಯೋಜನೆ, ರೈತರ ಸಮಸ್ಯೆಗಳು, ಕೈಗಾರಿಕೆಗಳು, ಶೈಕ್ಷಣಿಕ ಇತ್ಯಾದಿಗಳ ಅಭಿವೃದ್ಧಿಯ ಕುರಿತು ಅಧಿವೇಶನದ ಪ್ರಾರಂಭಿಕ ಹಂತದಲ್ಲಿಯೇ ಚರ್ಚೆಗೆ ಅವಕಾಶ ಕಲ್ಪಿಸಿ, ಆದ್ಯತೆ ನೀಡಬೇಕೆಂದು ಪತ್ರದಲ್ಲಿ ತಿಳಿಸಿದ್ದಾರೆ.
