ಉದಯವಾಹಿನಿ, ಡಮಾಸ್ಕಸ್ಡಿ: ಸಿರಿಯಾ ಬಂಡುಕೋರರ ಕೈವಶವಾಗಿ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ದೇಶ ಬಿಟ್ಟು ಪರಾರಿಯಾಗುತ್ತಿದ್ದಂತೆ ಅಮೆರಿಕ ಅಲ್ಲಿನ ಐಸಿಸ್ ನೆಲೆಗಳ ಮೇಲೆ ತೀವ್ರ ದಾಳಿ ನಡೆಸಿದೆ.
ಅಸ್ಸಾದ್ ದೇಶ ತೊರೆದಿರುವುದನ್ನು ಸೇನೆ ಖಚಿತಪಡಿಸಿದ್ದು, ಅಧ್ಯಕ್ಷರ ಅಧಿಕಾರ ಕೊನೆಗೊಂಡಿದೆ ಎಂದು ಹೇಳಿದೆ. ಐಸಿಸ್ ಎಂದು ಕರೆಯಲ್ಪಡುವ ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಗುಂಪು ಸಿರಿಯಾದಲ್ಲಿ ತನ್ನನ್ನು ತಾನು ಮರುಸ್ಥಾಪಿಸಲು ಪ್ರಸ್ತುತ ಪರಿಸ್ಥಿತಿಯ ಲಾಭವನ್ನು ಪಡೆಯಲು ಪ್ರಯತ್ನಿಸುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಆರೋಪಿಸಿದ್ದಾರೆ.
ಸಿರಿಯಾದೊಳಗೆ ಐಸಿಸ್ ವಿರುದ್ಧ ತನ್ನ ಪಡೆಗಳು ದಾಳಿ ನಡೆಸಿವೆ ಎಂದು ಅವರು ಶ್ವೇತಭವನಕ್ಕೆ ಮಾಹಿತಿ ನೀಡಿದ್ದಾರೆ. ತನ್ನ ಯುದ್ಧ ವಿಮಾನಗಳು ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರು ಮತ್ತು ಸ್ಥಾನಗಳನ್ನು ಗುರಿಯಾಗಿಸಿಕೊಂಡಿವೆ ಎಂದು ಅಮೆರಿಕ ಮಿಲಿಟರಿ ಪಡೆ ದಢಪಡಿಸಿದೆ. ಅಮೆರಿಕ ತನ್ನ ಅತ್ಯಾಧುನಿಕ ವಾಯುಪಡೆಯ ವಿಮಾನಗಳನ್ನು ಬಳಸಿಕೊಂಡು ಮಧ್ಯ ಸಿರಿಯಾದಲ್ಲಿ 75 ಕ್ಕೂ ಹೆಚ್ಚು ಸ್ಥಳಗಳ ಮೇಲೆ ಮೇಲೆ ದಾಳಿ ಮಾಡಲಾಗಿದೆ ಎಂದು ಅಮೆರಿಕ ಸೆಂಟ್ರಲ್ ಕಮಾಂಡ್ ತಿಳಿಸಿದೆ. ಇಸ್ಲಾಮಿಕ್ ಸ್ಟೇಟ್ ಹೋರಾಟಗಾರರ ವಿರುದ್ಧ ಹೋರಾಡಲು ಯುಎಸ್ ಆಗ್ನೇಯ ಸಿರಿಯಾಕ್ಕೆ ಸುಮಾರು 900 ಸೈನಿಕರ ತುಕಡಿಯನ್ನು ನಿಯೋಜಿಸಿದೆ.
