ಉದಯವಾಹಿನಿ, ತುಮಕೂರು: ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯಿಂದ ಕೊಡಮಾಡುವ ರಾಷ್ಟ್ರೀಯ ‘ವೀರಭದ್ರ ಪ್ರಶಸ್ತಿ’ಗೆ ಕೇಂದ್ರ ಜಲ ಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಭಾಜನರಾಗಿದ್ದಾರೆ. ‘ಡಿ. 12ರಂದು ಸಂಜೆ 5 ಗಂಟೆಗೆ ನವದೆಹಲಿಯ ಭಾರತ್ ಮಂಟಪ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ ಹಾಗೂ ರಾಜ್ಯದ ಸಂಸದರು ಭಾಗವಹಿಸಲಿದ್ದಾರೆ’ ಎಂದು ವೇದಿಕೆಯ ಕಾರ್ಯದರ್ಶಿ ಎಸ್.ಸೋಮಶೇಖರ ಗಾಂಧಿ ಇಲ್ಲಿ ಸೋಮವಾರ ಹೇಳಿದರು. ಇದುವರೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಸಂಸದ ಪ್ರಭಾಕರ ಕೋರೆ, ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮುಖಂಡರಾದ ಕೆ.ಆರ್.ಲಿಂಗರಾಜು, ಮಹೇಶ್ವರಮೂರ್ತಿ ಉಪಸ್ಥಿತರಿದ್ದರು.
