ಉದಯವಾಹಿನಿ, ಚಿಕ್ಕಮಗಳೂರು: ನಗರದ ಹೊರ ವಲಯದ ಇಂದಾವರ ಬಳಿ ನಿರ್ಮಾಣವಾಗುತ್ತಿರುವ ಹೊಸ ಬಡಾವಣೆ ಕಾಮಗಾರಿ ಆಮೆ ಗತಿಯಲ್ಲಿ ಸಾಗಿದ್ದು, 58 ಎಕರೆ ಭೂಸ್ವಾಧೀನ ಬಾಕಿ ಇರುವುದು ಬಡಾವಣೆಗೆ ಗ್ರಹಣವಾಗಿ ಕಾಡುತ್ತಿದೆ. ಅರ್ಜಿದಾರರು ಮತ್ತು ಭೂಮಾಲೀಕರು ನಿವೇಶನ ಕನಸು ಸದ್ಯಕ್ಕೆ ಈಡೇರುವ ಲಕ್ಷಣಗಳಿಲ್ಲ. ನಗರದಿಂದ ಮೂರು ಕಿಲೋ ಮೀಟರ್ ದೂರದಲ್ಲಿರುವ ಇಂದಾವರ ಗ್ರಾಮದ ಸುತ್ತಮುತ್ತಲ ರೈತರ ಜಮೀನಿನಲ್ಲಿ ಬಡಾವಣೆ ನಿರ್ಮಾಣವಾಗುತ್ತಿದೆ. 208 ಎಕರೆ 37 ಗುಂಟೆ ಜಾಗದಲ್ಲಿ ಹೊಸ ಬಡಾವಣೆ ತಲೆ ಎತ್ತುತ್ತಿದೆ, ಭೂಮಾಲೀಕರ ಸಹಭಾಗಿತ್ವದಲ್ಲಿ ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಸಿಡಿಎ) ಈ ಕಾಮಗಾರಿ ಆರಂಭಿಸಿದೆ.
