ಉದಯವಾಹಿನಿ, ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರಕ್ಕೆ ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದ ವೇಳೆ ದುರಂತ ಸಂಭವಿಸಿದ್ದು ಕೋಲಾರದ ವಸತಿ ಶಾಲೆಯ ಒಂಬತ್ತನೇ ತರಗತಿಯ ನಾಲ್ವರು ವಿದ್ಯಾರ್ಥಿನಿಯರು ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಕೋಲಾರ ಜಿಲ್ಲೆಯ ಮುಳಬಾಗಿಲು ಮೊರಾರ್ಜಿ ದೇಸಾಯಿ ವಸತಿ ಶಾಲೆಯ 46 ವಿದ್ಯಾರ್ಥಿಗಳು ಮತ್ತು ಆರು ಶಿಕ್ಷಕರ ತಂಡ ಮಂಗಳವಾರ ತಮ್ಮ ಶಾಲಾ ಪ್ರವಾಸದ ಅಂಗವಾಗಿ ಮುರುಡೇಶ್ವರಕ್ಕೆ ತೆರಳಿತ್ತು. ಪೊಲೀಸರ ಪ್ರಕಾರ, ಸಂಜೆ 5.30ರ ಸುಮಾರಿಗೆ ಶಿಕ್ಷಕರು, ವಿದ್ಯಾರ್ಥಿಗಳ ಜೊತೆಗೆ ಬೀಚ್‌ಗೆ ತೆರಳಿದರು. ಜೀವರಕ್ಷಕರ ಎಚ್ಚರಿಕೆಯ ಹೊರತಾಗಿಯೂ, ಏಳು ವಿದ್ಯಾರ್ಥಿಗಳು ಸಮುದ್ರದ ಅಲೆಗಳಿಗೆ ಸಿಕ್ಕಿ ಕೊಚ್ಚಿ ಹೋಗಿದ್ದರು. ಈ ವೇಳೆ ಮೂವರು ವಿದ್ಯಾರ್ಥಿಗಳನ್ನು ಜೀವರಕ್ಷಕರು ಮತ್ತು ಇತರ ಏಜೆನ್ಸಿಗಳ ಸಹಾಯದಿಂದ ರಕ್ಷಿಸಲಾಗಿತ್ತು. ಆದರೆ ನಾಲ್ವರು ಸಮುದ್ರ ಪಾಲಾಗಿದ್ದರು.

ಓರ್ವ ವಿದ್ಯಾರ್ಥಿನಿ ಶ್ರವಂತಿ ಮೃತದೇಹವನ್ನು ಹೊರತೆಗೆಯಲಾಗಿತ್ತು. ಇಂದು ಜೀವರಕ್ಷಕರು, ಗೃಹ ರಕ್ಷಕರು, ಮೀನುಗಾರರು ಮತ್ತು ಪೊಲೀಸರನ್ನು ಒಳಗೊಂಡ ತಂಡ ಶೋಧ ಕಾರ್ಯಾಚರಣೆ ನಡೆಸಿದ್ದು ಬೆಳಿಗ್ಗೆ ಮೂವರು ಬಾಲಕಿಯರ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 106 (ನಿರ್ಲಕ್ಷ್ಯದಿಂದ ಸಾವಿಗೆ ಕಾರಣ) ಪ್ರಕರಣವನ್ನು ದಾಖಲಿಸಲಾಗಿದ್ದು ಎಲ್ಲಾ ಆರು ಶಿಕ್ಷಕರನ್ನು ಬಂಧಿಸಲಾಗಿದೆ ಎಂದು ಉತ್ತರ ಕನ್ನಡದ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಎಂ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!