ಉದಯವಾಹಿನಿ, ಕೊಣನೂರು: ಕಳೆದೆರಡು ದಿನಗಳಿಂದ ಮೋಡ ಕವಿದ ವಾತಾವರಣವಿದ್ದು, ತುಂತುರು ಮಳೆ ಸುರಿಯುತ್ತಿರುವುದು ಭತ್ತ ಮತ್ತು ರಾಗಿ ಬೆಳೆಗಾರರನ್ನು ಕಂಗೆಡಿಸಿದೆ. ಭತ್ತ ಬೆಳೆಯಲು ಪ್ರಸಿದ್ಧಿಯಾಗಿರುವ ಕೊಣನೂರು ಹೋಬಳಿಯ ವ್ಯಾಪ್ತಿಯಲ್ಲಿ ಬಹುತೇಕ ಭತ್ತ ಕಟಾವಿಗೆ ಸಿದ್ಧವಾಗಿದೆ. ಆದರೆ, ಮಳೆಯಿಂದಾಗಿ ಹುಲ್ಲು ಮತ್ತು ಭತ್ತ ಹಾಳಾಗಬಹುದು ಎಂದು ರೈತರು ಕಟಾವಿಗೆ ಹಿಂದೇಟು ಹಾಕುತ್ತಿದ್ದಾರೆ.
ಭತ್ತ ಕಟಾವು ಮಾಡದಿದ್ದರೆ ಒಂದಷ್ಟು ಭತ್ತ ಉದುರಬಹುದು. ಆದರೆ ಕಟಾವು ಮಾಡಿದ ನಂತರ ಮಳೆ ಸುರಿದಲ್ಲಿ ಹುಲ್ಲು ಕಪ್ಪಾಗಿ ಉಪಯೋಗಕ್ಕೆ ಬಾರದಂತೆ ಆಗುತ್ತದೆ. ಭತ್ತವು ಉಪಯೋಗಿಸಲು ಯೋಗ್ಯವಾಗಿರುವುದಿಲ್ಲ ಎಂಬ ಕಾರಣದಿಂದ ಕಟಾವಿಗೆ ದಿನಗಣನೆ ಮಾಡುತ್ತಿದ್ದಾರೆ. ಕೆಲವೆಡೆ ಈಗಾಗಲೇ ಕಟಾವು ಮಾಡಿರುವ ಭತ್ತದ ಅರಿಗಳು ಮೋಡ ಕವಿದ ವಾತಾವರಣ ಮತ್ತು ತುಂತುರು ಮಳೆಯಿಂದಾಗಿ ಒಣಗುತ್ತಿಲ್ಲ. ಜೊತೆಗೆ ತಳಭಾಗದಿಂದ ಗೆದ್ದಲು ತಿನ್ನಲು ಪ್ರಾರಂಭವಾಗುವ ಸಾಧ್ಯತೆ ಹೆಚ್ಚಿದ್ದರೂ ಜಮೀನಿನಲ್ಲೂ ಬಿಡಲಾಗದೇ, ಮನೆಗೂ ತರಲಾಗದೆ ಒದ್ದಾಡುವಂತಾಗಿದೆ.
