
ಉದಯವಾಹಿನಿ, ಬೆಂಗಳೂರು: ಆಧ್ಯಾತವು ಮಾನವ ಜೀವನದ ಅನರ್ಘ ರತ್ನ ಸಂಪತ್ತು. ಈ ಸಂಪತ್ತು ಆಧ್ಯಾತ ಜೀವಿಗಳ ಸಾಧನೆ ಸಿದ್ಧಿ, ಜನತೆಯ ಜೀವನವನ್ನು ಬೆಳಗುವ ದಾರಿದೀಪವಾಗಿದೆ. ಇದು ಅನುಭವಿಗಳ ಅಮೃತ ಅನುಭವವೂ ಹೌದು, ಈ ಅನುಭವದ ಫಲವಾಗಿ ಭರತ ಖಂಡದಲ್ಲಿ ವಿಶ್ವ ಕಲ್ಯಾಣಕ್ಕಾಗಿ ಅನೇಕ ಮಠಮಾನ್ಯಗಳು ಸ್ಥಾಪಿತಗೊಂಡಿವೆ.
ಮರಗಳು ಮನುಷ್ಯನ ಬದುಕಿನಲ್ಲಿ ಆಧ್ಯಾತಿಕ ನೆಲೆಯ ಕೇಂದ್ರ ಸ್ನಾನವೂ ಹೌದು. ಭಾರತದ ಭವ್ಯ ಪರಂಪರೆಯಲ್ಲಿ ಆಧ್ಯಾತಿಕ ಕೇಂದ್ರವಾಗಿರುವ ಮಠಮಾನ್ಯಗಳು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕಳಕಳಿಯಿಂದ ಸಮಾಜ ಕಲ್ಯಾಣಕ್ಕಾಗಿ ಸೇವೆ ಸಲ್ಲಿಸುವ ಮೂಲಕ ಸಮಾಜದ ಪ್ರಗತಿಯಲ್ಲಿ ಬಹುಮುಖ್ಯ ಪಾತ್ರ ವಹಿಸಿಕೊಂಡು ಬರುತ್ತಿವೆ.
ಅನೇಕ ಮಠಗಳಲ್ಲಿ ಬೆಂಗಳೂರಿನ ಕೆಂಗೇರಿಯಲ್ಲಿರುವ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠವೂ ಒಂದು. ಈ ಮಠದ ಪೀಠಾಧ್ಯಕ್ಷರಾದ ಶ್ರೀ ಕುಮಾರ ಚಂದ್ರಶೇಖರನಾಥ ಮಹಾಸ್ವಾಮೀಜಿಗಳು ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ತಮದೇ ಆದ ಕೊಡುಗೆಗಳನ್ನು ನೀಡುವ ಮೂಲಕ ಸಮಾಜದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಶ್ರೀಗಳ ವಯಸ್ಸಿನ ಕಾರಣದಿಂದ ಸರ್ಕಾರದ ಉನ್ನತ ಹುದ್ದೆಯಲ್ಲಿರುವ ನಿಷ್ಠಾವಂತ ಅಧಿಕಾರಿಯೊಬ್ಬರು ಶ್ರೀಮಠದ ಜವಾಬ್ದಾರಿ ವಹಿಸಿಕೊಳ್ಳುತ್ತಿರುವುದು ನಿಜಕ್ಕೂ ಕ್ರಾಂತಿಕಾರಿ ಬೆಳವಣಿಗೆ.ಶ್ರೀಮಠದ ಜಗದ್ಗುರು ಶ್ರೀ ಕುಮಾರ ಚಂದ್ರಶೇಖರನಾಥ ಮಹಾಸ್ವಾಮಿಗಳಿಂದ ಸನ್ಯಾಸ ದೀಕ್ಷೆ ಪಡೆದು ಅವರ ಉತ್ತರಾಧಿಕಾರಿಯಾಗಿ, ನಾಡಿನ ಜಗದ್ಗುರುಗಳು, ಮಹಾಸ್ವಾಮಿಗಳು, ಸಾಧುಸಂತರ ಸಾನಿಧ್ಯದಲ್ಲಿ ಹಾಗೂ ಗಣ್ಯರ ಸಮಕ್ಷಮದಲ್ಲಿ ಶ್ರೀ ನಿಶ್ಚಲಾನಂದನಾಥ ಮಹಾಸ್ವಾಮಿಗಳು ಎಂಬ ನೂತನ ನಾಮಕರಣಗೊಂಡು ಪೀಠಾರೋಹಣ ಮಾಡಿದ್ದಾರೆ.
