
ಉದಯವಾಹಿನಿ, ವಾಷಿಂಗ್ಟನ್ : ಕಳೆದ ಹಲವು ತಿಂಗಳಿನಿಂದ ತೀವ್ರ ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದ ಭಾರತದ ಹೆಸರಾಂತ ತಬಲಾ ಮಾಂತ್ರಿಕ ಜಾಕೀರ್ ಹುಸೇನ್‌ರವರು (73) ನಿಧನರಾಗಿದ್ದಾರೆ.
73 ವಯಸ್ಸಿನ ಜಾಕಿರ್ ಅವರಿಗೆ ಕಳೆದ ಎರಡು ವಾರಗಳಿಂದ ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಂಡಿದ್ದು, ಹೀಗಾಗಿ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಆದರೆ ತಬಲಾ ಮಾಂತ್ರಿಕ ಜಾಕಿರ್ ಹುಸೇನ್ ಅವರು ಸ್ಯಾನ್ ಫ್ರಾನ್ಸಿಸ್ಕೋದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಅವರ ಕುಟುಂಬ ದೃಢಪಡಿಸಿದೆ.
ಫೆಬ್ರವರಿ 2024 ರಲ್ಲಿ ಮೂರು ಗ್ರ್ಯಾಮಿ ಪ್ರಶಸ್ತಿಗಳನ್ನು ಪಡೆದಿದ್ದರು. ಜಾಕಿರ್ ಹುಸೇನ್ ಕಥಕ್ ನೃತ್ಯಗಾರ್ತಿ ಮತ್ತು ಶಿಕ್ಷಕಿ ಆಂಟೋನಿಯಾ ಮಿನ್ನೆಕೋಲಾ ಅವರನ್ನು ವಿವಾಹವಾಗಿದ್ದ ಅವರು, ಅವರ ಮ್ಯಾನೇಜರ್ ಕೂಡ ಆಗಿದ್ದರು. ಅವರಿಗೆ ಅನಿಸಾ ಖುರೇಷಿ ಮತ್ತು ಇಸಾಬೆಲ್ಲಾ ಖುರೇಷಿ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಜಾಕಿರ್ ಹುಸೇನ್ ನಿಧನಕ್ಕೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.
ಈ ಮೊದಲು ಅವರ ಪಿಆರ್‌ಒ ಮೃತಪಟ್ಟಿಲ್ಲ, ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ಭಾನುವಾರ ತಿಳಿಸಿದ್ದರು. ಅಂತಿಮವಾಗಿ ಅವರ ಕುಟುಂಬ ವರ್ಗ ಹುಸೇನ್ ನಿಧನರಾಗಿದ್ದಾರೆ ಎಂದು ದೃಢಪಡಿಸಿದೆ. ಕಳೆದ ಎರಡು ವಾರಗಳಿಂದ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರು. ನಂತರ ಅವರು ಅಸ್ವಸ್ಥರಾಗಿದ್ದು, ಐಸಿಯುನಲ್ಲಿ ದಾಖಲಾಗಿದ್ದರು. ನಾವೆಲ್ಲರೂ ಅವರ ಪರಿಸ್ಥಿತಿಯ ಬಗ್ಗೆ ಚಿಂತಿತರಾಗಿದ್ದೇವೆ ಎಂದು ಅವರ ಸ್ನೇಹಿತ ಮತ್ತು ಕೊಳಲು ವಾದಕ ರಾಕೇಶ್ ಚೌರಾಸಿಯಾ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.
