ಉದಯವಾಹಿನಿ, ಬೆಂಗಳೂರು: ಮಾರುಕಟ್ಟೆಯಲ್ಲಿ ಕೆಂಪು ಚೆಲುವೆ ಟೊಮೆಟೊ ಬೆಲೆ ಪಾತಾಳಕ್ಕೆ ಇಳಿದಿದೆ. ಈ ಬಾರಿ ಉತ್ತಮ ಬೆಲೆ ಸಿಗುವ ಕನಸಿನಲ್ಲಿ ಹೆಚ್ಚಿನ ಟೊಮೆಟೊ ಬೆಳೆದ ರೈತರು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಟೊಮೆಟೊ ಬೆಳೆದ ಅನ್ನದಾತರು ಮಾರುಕಟ್ಟೆಯಲ್ಲಿ ಸಿಗದೇ ಬೆಲೆ ಕುಸಿತ ಕಂಡು ಕಂಗಾಲಾಗಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಟೊಮೆಟೊ ಬೆಲೆ ಏರಿಕೆ ಕಂಡು ಮಾಯಕೊಂಡ ಭಾಗದ ರೈತರು ನೂರಾರು ಎಕರೆಯಲ್ಲಿ ಟೊಮೆಟೊ ಬೆಳೆದಿದ್ದಾರೆ. ಆದರೆ ಟೊಮೆಟೊ ಬೆಲೆ ಏಕಾಏಕಿ ಕುಸಿದಿರುವುದರಿಂದ ರೈತರು ಕಂಗಾಲಾಗಿದ್ದಾರೆ. ದಾವಣಗೆರೆ ತಾಲೂಕಿನ ಮಾಯಕೊಂಡ ಹೋಬಳಿಯಲ್ಲಿ ಟೊಮೆಟೊ ಬೆಳೆ ಹೆಚ್ಚಾಗಿ ಬೆಳೆಯಲಾಗುತ್ತದೆ. ಮಾಯಕೊಂಡ ಸುತ್ತಮುತ್ತಲಿನ ಬಹುತೇಕ ಗ್ರಾಮಗಳ ಜಮೀನುಗಳಲ್ಲಿ ರೈತರು ಬೆಳೆದ ಟೊಮೆಟೊಗಳು ರಾಷ್ಟ್ರಮಟ್ಟದಲ್ಲಿ ರಫ್ತಾಗುವ ಹೆಗ್ಗಳಿಕೆಗೆ ಪಾತ್ರವಾಗಿವೆ. ಬೆಲೆ ಹೆಚ್ಚಿರುವುದನ್ನು ಮನಗಂಡ ರೈತರು ತಮ್ಮ ಹೊಲಗಳಲ್ಲಿ ಹೆಚ್ಚು ಟೊಮೆಟೊ ನಾಟಿ ಮಾಡಿದ್ದಾರೆ.
ದಾವಣಗೆರೆ ತಾಲೂಕಿನ ಮಾಯಕೊಂಡ, ಕೊಡಗಾನೂರು, ಸುಲ್ತಾನಿಪುರ, ನೇರ್ಲಿಗೆ, ಹೊನ್ನನಾಯಕನಹಳ್ಳಿ ಮೊದಲಾದ ಗ್ರಾಮದ ಜಮೀನುಗಳಲ್ಲಿ ೧೦೦ – ೨೦೦ ಎಕರೆಯಲ್ಲಿ ರೈತರು ಟೊಮೆಟೊ ಬೆಳೆದಿದ್ದಾರೆ. ಟೊಮೆಟೊ ಬೆಲೆ ಕುಸಿತ ಕಂಡ ನಂತರ ಮಾರುಕಟ್ಟೆಗೆ ಕೊಂಡೊಯ್ಯಲು ಹಿಂದೇಟು ಹಾಕುತ್ತಿರುವ ರೈತರು ಟೊಮೆಟೊ ಬೆಳೆಯಲು ಎಕರೆಗೆ ೮೦-೯೦ ಸಾವಿರ ಖರ್ಚು ಮಾಡಿದ್ದಾರೆ. ಈಗ ಬೆಲೆ ಇಲ್ಲದ ಕಾರಣ ರೈತರು ಸಾಲದ ಸುಳಿಯಲ್ಲಿ ಸಿಲುಕುವ ಸ್ಥಿತಿ ನಿರ್ಮಾಣವಾಗಿದೆ.
