ಉದಯವಾಹಿನಿ, ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ೭ನೇ ಆರೋಪಿ ಅನುಕುಮಾರ್ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿದ್ದಾರೆ.ಕಳೆದ ಡಿ.೧೫ ಅನುಕುಮಾರ್‌ಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಅನುಕುಮಾರ್ ಅವರನ್ನು ಇಂದು ಬಿಡುಗಡೆ ಮಾಡಲಾಗಿದೆ.
ಜೈಲಿನಿಂದ ಬಿಡುಗಡೆಯಾದ ಅನುಕುಮಾರ್ ಕೈಯಲ್ಲಿ ಭಗವದ್ಗೀತೆ ಪುಸ್ತಕ ಹಿಡಿದು ಹೊರಬಂದಿದ್ದಾರೆ. ಕೇಂದ್ರ ಕಾರಾಗೃಹದಿಂದ ಬಳ್ಳಾರಿ ಕಾರಾಗೃಹಕ್ಕೆ ವರ್ಗಾವಣೆಯಾಗುವಾಗ ನಟ ದರ್ಶನ್ ನೀಡಿದ್ದ ಭಗವದ್ಗೀತೆ ಪುಸ್ತಕದೊಂದಿಗೆ ಕಾಲ ಕಳೆದಿದ್ದ ಅನುಕುಮಾರ್, ಅದೇ ಪುಸ್ತಕ ಹಿಡಿದು ಹೊರಬಂದಿದ್ದು ಬಳಿಕ ತನ್ನ ಸಹೋದರನೊಂದಿಗೆ ತೆರಳಿದ್ದಾನೆ.
ದರ್ಶನ್ ಮತ್ತು ಸಹಚರರಿಂದ ಹತ್ಯೆಯಾದ ರೇಣುಕಾಸ್ವಾಮಿ ಅವರನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತಂದ ಆರೋಪದಡಿ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಅನುಕುಮಾರ್ ಅವರನ್ನು ಬಂಧಿಸಿದ್ದರು.
ಆರೋಪಿ ಜಗದೀಶ್ ಬಿಡುಗಡೆ: ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ ಗ್ಯಾಂಗ್ ನ ಆರನೇ ಆರೋಪಿ ಜಗದೀಶ್ ಶಿವಮೊಗ್ಗ ಕೇಂದ್ರ ಕಾರಾಗೃಹದಿಂದ ಬುಧವಾರ ಸಂಜೆ ಬಿಡುಗಡೆ ಆಗಿದ್ದಾರೆ. ಕಳೆದ ವಾರವೇ ಹೈಕೋರ್ಟ್ ದರ್ಶನ್ ಸೇರಿದಂತೆ ಎಲ್ಲ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿತ್ತು.
ಜಗದೀಶ್ ಗೆ ಕೋರ್ಟ್ ಪ್ರಕ್ರಿಯೆ ಪೂರ್ಣವಾಗದ ಕಾರಣ ಜೈಲಿನಿಂದ ಬಿಡುಗಡೆ ತಡವಾಗಿತ್ತು. ನಿನ್ನೆ ಬೆಳಗ್ಗೆ ಬೆಂಗಳೂರಿನ ಕೋರ್ಟ್ ನಲ್ಲಿ ಜಾಮೀನು ಪ್ರಕ್ರಿಯೆ ಮುಗಿದಿದ್ದರಿಂದ ಸಂಜೆ ಶಿವಮೊಗ್ಗದ ಕೇಂದ್ರ ಕಾರಾಗೃಹಕ್ಕೆ ಜಗದೀಶ್ ಬಿಡುಗಡೆಯ ಪತ್ರ ಇಮೇಲ್ ನಲ್ಲಿ ಬಂದ ಕಾರಣಕ್ಕೆ ಸಂಜೆಯೇ ಜಗದೀಶ್ ಅವರನ್ನು ಬಿಡುಗಡೆ ಮಾಡಲಾಯಿತು.

Leave a Reply

Your email address will not be published. Required fields are marked *

error: Content is protected !!