ಉದಯವಾಹಿನಿ, ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮೇಳನ ಮಂಡ್ಯದಲ್ಲಿ 30 ವರ್ಷಗಳ ಬಳಿಕ ನೆರವೇರುತ್ತಿದ್ದು, ಲಕ್ಷಾಂತರ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಲಿದ್ದು ಗಣ್ಯರು, ಸಾಹಿತ್ಯಾಸಕ್ತರು ಮತ್ತು ಸಾರ್ವಜನಿಕರ ಸುರಕ್ಷತೆ ಕಾಪಾಡುವ ಹೊಣೆ ಪೊಲೀಸರ ಮೇಲಿದ್ದು, ಯಾವುದೇ ಅನಾಹುತಕ್ಕೆ ಎಡೆಮಾಡಿಕೊಡದಂತೆ ಕರ್ತವ್ಯ ನಿರ್ವಹಿಸಬೇಕು ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರು ಹೇಳಿದರು.
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಸಚಿವರು, ಸಮೇಳನಕ್ಕೆ ಆಗಮಿಸುವವರಿಗೆ ಸಂಚಾರ ಮಾರ್ಗದ ಫಲಕಗಳು ಹಾಗೂ ಆಗಮನ, ನಿರ್ಗಮನದ ಸ್ಥಳಗಳ ಕುರಿತ ಸೂಚನಾ ಫಲಕಗಳನ್ನು ಹೆದ್ದಾರಿಗಳಲ್ಲಿ ಹಾಕಬೇಕು. ಜನದಟ್ಟಣೆ ಹೆಚ್ಚಾಗಿರುವುದರಿಂದ ಕಾನೂನು ಸುವ್ಯವಸ್ಥೆ ಹದಗೆಡದಂತೆ ನೋಡಿಕೊಳ್ಳಬೇಕು. ವ್ಯಾಪಕವಾಗಿ ಪೊಲೀಸ್ ಬಂದೋಬಸ್ತ್ ಆಗಬೇಕು ಎಂದರು. ಅಡುಗೆ ಮಾಡುವ ಸ್ಥಳ, ಪಾರ್ಕಿಂಗ್ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಬೆಂಕಿ ಅವಘಢ ಸಂಭವಸಿದರೆ ಅದನ್ನು ನಂದಿಸಲು ಅಗ್ನಿಶಾಮಕ ವಾಹನಗಳನ್ನು ನಿಯೋಜಿಸಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಸಮೇಳನ ಸಂಬಂಧ ಕೈಗೊಂಡಿರುವ ಪೊಲೀಸ್ ಬಂದೋಬಸ್ತ್ ಕುರಿತು ಸಚಿವರಿಗೆ ವಿವರವಾಗಿ ಮಾಹಿತಿ ನೀಡಿದರು.

ಸಮೇಳನಾಧ್ಯಕ್ಷರ ಮೆರವಣಿಗೆ ಸಾಗುವ ಮಾರ್ಗದಲ್ಲಿ ಸೂಕ್ತ ಬಂದೋಬಸ್ತ್ ಮಾಡಲಾಗಿದ್ದು, ಸಮೇಳನಕ್ಕೆ ಬೆಂಗಳೂರು- ಮೈಸೂರು ಕಡೆಯಿಂದ ಆಗಮಿಸುವವರಿಗೆ, ನಿರ್ಗಮಿಸುವವರಿಗೆ ಮಾರ್ಗ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ ಎಂದು ವಿವರಿಸಿದರು. 6 ಎಎಸ್ ಪಿ, 21 ಡಿವೈಎಸ್ ಪಿ, 63 ಸಿಪಿಐ, 170 ಪಿಎಸ್ ಐ, 262 ಎಎಸ್ ಐ, 1500 ಪೇದೆಗಳು, 1000 ಹೋಂ ಗಾರ್ಡ್, 165 ಮಹಿಳಾ ಕಾನ್ಸ್ಟೇಬಲ್ ಒಳಗೊಂಡಂತೆ 14 ಜಿಲ್ಲೆಗಳಿಂದ 3200ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ಆಗಮಿಸಲಿದ್ದಾರೆ. ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಪಾಳಿಯಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!