ಉದಯವಾಹಿನಿ, ನವದೆಹಲಿ: ದೇಶದ ಅಭಿವೃದ್ದಿಗೆ ಹೊಸ ಮುನ್ನುಡಿ ಬರೆದು ವಿಶ್ವವೇ ಭಾರತದ ಕಡೆಗೆ ತಿರುಗಿ ನೋಡುವಂತೆ ಮಾಡಿದ್ದ ಜಗತ್ತಿನ ಶ್ರೇಷ್ಠ ಆರ್ಥಿಕ ತಜ್ಞ ಹೆಮ್ಮೆ ಯ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ, ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಇತಿಹಾಸ ಪುಟಗಳಲ್ಲಿ ಸೇರಿದರು.
ಉಸಿರಾಟದ ತೊಂದರೆಯಿಂದಾಗಿ ದೆಹಲಿಯ ಏಮ್ಸೌ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದ ಡಾ.ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆಯನ್ನು ಸಿಖ್ ಸಂಪ್ರದಾಯದಂತೆ ನಿಗಮ್ ಬೋಧ್ಘಾಟ್ನಲ್ಲಿ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.
ಪುತ್ರಿ ಧಮನ್ ಸಿಂಗ್ ಸೇರಿದಂತೆ ಕುಟುಂಬಸ್ಥರು ಮಧ್ಯಾಹ್ನ 12.55ಕ್ಕೆ ಅಗ್ನಿಸ್ಪರ್ಶ ಮಾಡಿದ ನಂತರ ಡಾ.ಮನಮೋಹನ್ ಸಿಂಗ್ ಪಂಚಭೂತಗಳಲ್ಲಿ ಲೀನವಾದರು. ಈ ವೇಳೆ ಸಿಂಗ್ ಅಮರ್ ರಹೇ, ಅಮರ್ ರಹೇ ಎಂಬ ಘೋಷಣೆಗಳು ಮಾರ್ಧನಿಸಿದವು. ಇದಕ್ಕೂ ಮುನ್ನ ಪಾರ್ಥಿವ ಶರೀರದ ಮುಂದೆ ಶ್ರೀಗುರು ಗ್ರಂಥ ಸಾಹಿಬ್ ಜೀ ಅವರಿಂದ ಹಾಗೂ ಹಿರಿಯರು ಶ್ಲೋಕ ಪಠಿಸಿದರು.
ಕುಸಿಯುತ್ತಿದ್ದ ಭಾರತದ ಆರ್ಥಿಕತೆಯನ್ನು ಸರಿದಾರಿಗೆ ತಂದ ನವಭಾರತದ ಆರ್ಥಿಕತೆಯ ನಿರ್ಮಾತೃ, ದೇಶ ಕಂಡ ಶ್ರೇಷ್ಠ ಪ್ರಧಾನಿಯನ್ನು ಭಾರತೀಯರು ಭಾರವಾದ ಹೃದಯದಿಂದ ಬೀಳ್ಕೊಟ್ಟರು. ರಾಷ್ಟ್ರ ನಾಯಕರುಗಳು ಮನಮೋಹನ್ ಸಿಂಗ್ ಅವರಿಗೆ ಗೌರವ ಸಲ್ಲಿಸಿದ ಬಳಿಕ ಭೂ ಸೇನೆ, ವಾಯುಸೇನೆ ಮತ್ತು ನೌಕಾ ಸೇನಾ ಪಡೆಗಳಿಂದ ಸರ್ಕಾರಿ ಗೌರವ ಸೂಚಿಸಿ 21 ಸುತ್ತು ಕುಶಾಲ ತೋಪು ಹಾರಿಸಲಾಯಿತು. ನಂತರ ಸಿಂಗ್ ಅವರ ಪಾರ್ಥಿವ ಶರೀರಕ್ಕೆ ಹೊದಿಸಲಾಗಿದ್ದ ರಾಷ್ಟ್ರ ಧ್ವಜವನ್ನು ಅವರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.
ನಿಗಮ್ ಬೋಧ್ ಘಾಟ್ಗೆ ಪಾರ್ಥಿವ ಶರೀರ ತಲುಪಿದ ನಂತರ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಶ್ ಧನಕರ್, ಪ್ರಧಾನಿ ನರೇಂದ್ರಮೋದಿ, ಭೂತಾನ್ ದೇಶದ ರಾಜ ಜಿಗೆ ಕೇಸರ್ ನಮ್ಗೇಯ್ಲ್ ವಾಂಗ್ಚುಂಕ್, ದೆಹಲಿ ಮುಖ್ಯಮಂತ್ರಿ ಅತಿಶಿ ಸಿಂಗ್, ಕೇಂದ್ರ ಸಚಿವರಾದ ಅಮಿತ್ ಷಾ, ರಾಜನಾಥ್ ಸಿಂಗ್, ಜೆ.ಪಿ.ನಡ್ಡಾ, ಕಿರಣ್ ರಿಜಿಜು, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಮೂರು ಸೇನಾ ಪಡೆಗಳ ಮುಖ್ಯಸ್ಥರು ಸೇರಿದಂತೆ ಗಣ್ಯಾತಿ ಗಣ್ಯರು ಅಗಲಿದ ನಾಯಕನಿಗೆ ಪುಷ್ಪ ನಮನ ಸಲ್ಲಿಸಿದರು.

Leave a Reply

Your email address will not be published. Required fields are marked *

error: Content is protected !!