ಉದಯವಾಹಿನಿ, ಬಸವಕಲ್ಯಾಣ: ಬನಶಂಕರಿ ದೇವಿ ದೇವಸ್ಥಾನವು ನಗರದ ಪ್ರಸಿದ್ಧ ಶಕ್ತಿಪೀಠವಾಗಿದ್ದು, ಅಪಾರ ಭಕ್ತರ ಶ್ರದ್ದೆ ಮತ್ತು ಭಕ್ತಿಯ ಕೇಂದ್ರವಾಗಿದೆ. ಇಲ್ಲಿ 45 ನೇ ಜಾತ್ರೆ ಅಂಗವಾಗಿ ಜನವರಿ 7 ರಿಂದ ಜನವರಿ 13ರವರೆಗೆ ವಿವಿಧ ಕಾರ್ಯಕ್ರಮಗಳು ಮತ್ತು ರಥೋತ್ಸವ ಜರುಗಲಿವೆ. ಬದಾಮಿ ಬನಶಂಕರಿ ಉತ್ತರ ಕರ್ನಾಟಕದವರ ಪ್ರಮುಖ ದೇವತೆ. ಅಲ್ಲಿನ ದೇವಿಯ ಪ್ರತಿರೂಪವಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ನಂತರದಲ್ಲಿ ನಿರ್ಮಾಣಗೊಂಡಿರುವ ಕೆಲವೇ ಪ್ರಮುಖ ದೇವಸ್ಥಾನಗಳಲ್ಲಿ ಇದು ಒಂದು ಉತ್ತರಾಭಿಮುಖವಾದ ಗರ್ಭಗೃಹದಲ್ಲಿ ಆಕರ್ಷಕವಾದ ಬೆಳ್ಳಿಯ ಮೂರ್ತಿ ಪ್ರತಿಷ್ಠಾಪಿಸಲಾಗಿದೆ ವಾಡೆಯಂತೆ ಕಮಾನುಗಳಿರುವ ಹಳೆಯ ಶೈಲಿಯ ಮುಖಮಂಟಪ ಹಾಗೂ ಸಭಾಮಂಟಪ ನಿರ್ಮಿಸಲಾಗಿದೆ. ಆವರಣದಿಂದ ಒಳಪ್ರವೇಶಿಸುವ ಮುಖ್ಯ ದ್ವಾರವೂ ಕೆತ್ತನೆಯ ಕಲ್ಲಿನದಾಗಿದ್ದು, ಈ ದೇವಸ್ಥಾನ ಅತ್ಯಂತ ಹಳೆಯದು ಎಂಬುದಕ್ಕೆ ಸಾಕ್ಷಿಯಂತಿದೆ. ಆವರಣದಲ್ಲಿ ಎರಡು ದೀಪಸ್ತಂಬಗಳಿವೆ. ಗರ್ಭಗೃಹದ ಮೇಲೆ ಐದಾರು ಮೆಟ್ಟಿಲುಗಳಿರುವ ಚಿಕ್ಕ ಗೋಪುರ, ಕಲಶವಿದೆ. ಈ ದೇವಸ್ಥಾನದ ಕಾರಣ ಈ ಓಣಿಗೆ ಬನಶಂಕರಿ ಒಣಿ ಎನ್ನಲಾಗುತ್ತದೆ ಎದುರಿನ ಮುಖ್ಯ ರಸ್ತೆಗೂ ದೇವಿಯ ಹೆಸರಿದೆ. ಜಾತ್ರೆಯಲ್ಲಿನ ರಥ ಕಬ್ಬಿಣದ ಸಲಾಕೆಗಳದ್ದಾಗಿದೆ. ಇಡೀ ಜಿಲ್ಲೆಯಲ್ಲಿ ಬನಶಂಕರಿಯ ಇದೊಂದೇ ದೊಡ್ಡ ದೇವಸ್ಥಾನವಿರುವ ಕಾರಣ ದೂರದೂರದ ಭಕ್ತರು ಬರುತ್ತಾರೆ.
