ಉದಯವಾಹಿನಿ, ಬೆಂಗಳೂರು: ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಭೇಟಿಯಾಗುವ ಅವಶ್ಯಕತೆ ನನಗಿಲ್ಲ, ಅವರಾಗಿಯೇ ಬಂದು ನನ್ನ ಜೊತೆ ಮಾತನಾಡಿಸಿದರೂ ನಾನು ಮಾತನಾಡುವುದಿಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದರು. ಒಂದು ವೇಳೆ ವಿಜಯೇಂದ್ರ ಅವರು ಮಾತನಾಡಿಸಿದರೆ ಮಾತನಾಡುತ್ತೀರಾ? ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಏಕೆ ವಿಜಯೇಂದ್ರ ಅವರ ಜೊತೆ ಮಾತನಾಡಬೇಕು? ಹೈಕಮಾಂಡ್ ಕರೆದು ಮಾತನಾಡಿಸಿದರೆ ಮಾತನಾಡುತ್ತೇನೆ. ನಮಗೆ ಏನು ಅನ್ಯಾಯ ಆಗಿದೆ ಎಂಬುದು ನಮಗೆ ಗೊತ್ತಿದೆ. ನಮ ನೋವು ನಮಗೆ ಇದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ವಿಜಯೇಂದ್ರ ದೂರು ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಮಗೆ ಹೊಸ ವರ್ಷ ಯುಗಾದಿ. ವಿಜಯೇಂದ್ರ ಅವರಿಗೆ ಯಾವುದು ಹೊಸ ವರ್ಷ ಎಂಬುದು ನನಗೆ ಗೊತ್ತಿಲ್ಲ. ಪಕ್ಷದಿಂದ ನನ್ನ ಉಚ್ಚಾಟನೆ ಆಗುವುದಿಲ್ಲ. ಉಚ್ಚಾಟನೆ ಎನ್ನುವುದು ಮಾಧ್ಯಮಗಳು ಸೃಷ್ಟಿ ಮಾಡಿರುವುದು. ನನ್ನನ್ನ ಏಕೆ ಉಚ್ಚಾಟನೆ ಮಾಡುತ್ತಾರೆ? ಎಂದು ಪ್ರಶ್ನಿಸಿದರು.
ನಾನು ಯಾರ ಜೊತೆಯೂ ಅಡ್ಜೆಸೆಂಟ್ ಮಾಡಿಕೊಂಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಜಮೀರ್ ಅಹದ್ ಖಾನ್ ಜೊತೆ ನನ್ನ ಅಡ್ಜೆಸೆಂಟ್ ಇಲ್ಲ. ವಿಜಯೇಂದ್ರಗೆ ದೆಹಲಿ ನಾಯಕರು ಪದೇ ಪದೇ ಅಪಾಯಿಟೆಂಟ್ ಕೊಡುತ್ತಿದ್ದಾರೆ. ನಾವು ಯಾರ ಅಪಾಯಿಟೆಂಟ್ ಅನ್ನು ಕೇಳಿಲ್ಲ.
